ಡಾ. ಯು.ಟಿ. ಇಫ್ತಿಕಾರ್ ಅಲಿಗೆ ʼಸ್ಟಾರ್ ಆಫ್ ದಿ ಇಯರ್ʼ ಪ್ರಶಸ್ತಿ ನೀಡಿ ಗೌರವಿಸಿದ ತುಂಬೆ ಗ್ರೂಪ್
ದುಬೈ: ದಿ ನ್ಯಾಶನಲ್ ಕಮಿಷನ್ ಫಾರ್ ಅಲೈಡ್ ಆ್ಯಂಡ್ ಹೆಲ್ತ್ ಕೇರ್ ಕರ್ನಾಟಕದ ಅಧ್ಯಕ್ಷ ಡಾ. ಯು.ಟಿ. ಇಫ್ತಿಕಾರ್ ಅಲಿ ಅವರಿಗೆ ತುಂಬೆ ಸಮೂಹ ಸಂಸ್ಥೆ ಪ್ರತಿಷ್ಠಿತ ʼಸ್ಟಾರ್ ಆಫ್ ದಿ ಇಯರ್ʼ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ತುಂಬೆ ಫಿಸಿಕಲ್ ಥೆರಪಿ ಮತ್ತು ರಿಹೆಬಿಲಿಟೇಶನ್ ಆಸ್ಪತ್ರೆ(Thumbay Physical Therapy & Rehabilitation Hospital) ಡಾ.ಯುಟಿ ಇಫ್ತಿಕಾರ್ ಅಲಿ ಅವರಿಗೆ ಈ ಬಾರಿಯ ʼಸ್ಟಾರ್ ಆಫ್ ದಿ ಇಯರ್ʼ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಶೈಕ್ಷಣಿಕ ಹಾಗೂ ಸಾಮಾಜಿಕ ರಂಗದಲ್ಲಿ ಸೇವೆ ಸಲ್ಲಿಸಿರುತ್ತಿರುವ ಆರೋಗ್ಯ ವೃತ್ತಿಪರ, ಕ್ರೀಡಾ ಉತ್ಸಾಹಿ ಮತ್ತು ಸಾಮಾಜಿಕ ಮುಂದಾಳು ಆಗಿರುವ ಡಾ. ಯುಟಿ ಇಫ್ತಿಕಾರ್ ಅಲಿ COVID-19 ಸಾಂಕ್ರಾಮಿಕ ಸಮಯದಲ್ಲಿ ಜನರ ಕಲ್ಯಾಣಕ್ಕಾಗಿ ಮಾಡಿದ ದಣಿವರಿಯದ ಶ್ರಮವನ್ನು ಸಮಾರಂಭದಲ್ಲಿ ಉಲ್ಲೇಖಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಇಫ್ತಿಕಾರ್ ಅಲಿ, ಆರೋಗ್ಯ ಮತ್ತು ಶಿಕ್ಷಣವನ್ನು ಸುಧಾರಿಸುವಲ್ಲಿ ನನ್ನ ಪ್ರಯತ್ನಗಳನ್ನು ಮುಂದುವರಿಸಲು ಇದು ಪ್ರೇರಣೆಯಾಗಿದೆ. ನಾವೆಲ್ಲರೂ ಒಟ್ಟಾಗಿ ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯವನ್ನು ರೂಪಿಸಬಹುದಾಗಿದೆ ಎಂದು ಹೇಳಿದ್ದಾರೆ.
ತುಂಬೆ ಸಮೂಹದ ಸಂಸ್ಥಾಪಕ ಅಧ್ಯಕ್ಷರಾದ ಡಾ.ತುಂಬೆ ಮೊಯ್ದಿನ್, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಡಾ.ಇಫ್ತಿಕಾರ್ ಅವರ ಅಚಲವಾದ ಬದ್ಧತೆಯನ್ನು ಶ್ಲಾಘಿಸಿದ್ದಾರೆ. ಡಾ. ಇಫ್ತಿಕಾರ್ ಅಲಿ ಅವರ ಕಠಿಣ ಪರಿಶ್ರಮ ಮತ್ತು ಸಹಾನುಭೂತಿಯ ಮನೋಭಾವ ವಿಶೇಷವಾಗಿ ಸಾಂಕ್ರಾಮಿಕದಂತಹ ಸವಾಲಿನ ಸಮಯದಲ್ಲಿ ಅವರ ಕೊಡುಗೆಗಳು ಶಿಕ್ಷಣ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದು ಮಾತ್ರವಲ್ಲದೆ ಕರ್ನಾಟಕದಲ್ಲಿ ಆರೋಗ್ಯ ಸೇವೆಯನ್ನು ಗಣನೀಯವಾಗಿ ಸುಧಾರಿಸಿದೆ ಎಂದು ಹೇಳಿದ್ದಾರೆ.
ಯುಎಇಯ ಅಜ್ಮಾನಿನ ತುಂಬೆ ಮೆಡಿಸಿಟಿಯಲ್ಲಿ ನಡೆದ Innovation in Rehabilitation Practice and Medicine ಕುರಿತ 4ನೇ ಅಂತರಾಷ್ಟ್ರೀಯ ವಾರ್ಷಿಕ ಸಮ್ಮೇಳನದಲ್ಲಿ ಅವರನ್ನು ಗೌರವಿಸಲಾಯಿತು. ಆರೋಗ್ಯ ರಕ್ಷಣೆಯಲ್ಲಿನ ಪ್ರಗತಿಯನ್ನು ಚರ್ಚಿಸಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆರೋಗ್ಯ ವೃತ್ತಿಪರರು, ಸಂಶೋಧಕರು ಮತ್ತು ಉದ್ಯಮಿಗಳು ಭಾಗವಹಿಸಿದ್ದರು. ಅಜ್ಮಾನಿನ ಅಧ್ಯಕ್ಷರಾದ ಶೇಖ್ ಡಾ. ಮಜಿದ್ ಬಿನ್ ಸಯೀದ್ ಅಲ್ ನುಐಮಿ ಅವರು ಈ ಕ್ಷಣಕ್ಕೆ ಸಾಕ್ಷಿಯಾದರು.