90,000ಕ್ಕೂ ಅಧಿಕ ಹೆರಿಗೆ ಮಾಡಿಸಿದ ಮೈಲಿಗಲ್ಲು ದಾಟಿದ ತುಂಬೆ ಹೆಲ್ತ್ ಕೇರ್
ದುಬೈ : ತುಂಬೆ ಗ್ರೂಪ್ ನಿರ್ವಹಿಸುತ್ತಿರುವ ಯುಎಇಯ ಬೃಹತ್ ಖಾಸಗಿ ಶೈಕ್ಷಣಿಕ ಆಸ್ಪತ್ರೆಯಾದ ತುಂಬೆ ಯುನಿವರ್ಸಿಟಿ ಹಾಸ್ಪಿಟಲ್ 90,000ಕ್ಕೂ ಹೆಚ್ಚು ಹೆರಿಗೆಗಳನ್ನು ಮಾಡಿಸಿದ ಮೈಲಿಗಲ್ಲು ದಾಟಿದೆ.
ಜನವರಿ 2003ರಲ್ಲಿ ಪ್ರಥಮ ಹೆರಿಗೆ ಮಾಡಿಸಿದ ತುಂಬೆ ಹೆಲ್ತ್ ಕೇರ್, ಇದುವರೆಗೆ ಯಶಸ್ವಿಯಾಗಿ 90,000ಕ್ಕೂ ಅಧಿಕ ಹೆರಿಗೆಗಳನ್ನು ಮಾಡಿಸಿದೆ. ಆ ಮೂಲಕ ಯುಎಇಯಲ್ಲಿ ಹೆರಿಗೆ ಆರೈಕೆಗಾಗಿ ಹೆಚ್ಚು ಕೌಟುಂಬಿಕ ಬೇಡಿಕೆ ಹೊಂದಿರುವ ಆಸ್ಪತ್ರೆಯಾಗಿ ಗುರುತಿಸಲ್ಪಟ್ಟಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
ತುಂಬೆ ಯುನಿವರ್ಸಿಟಿ ಆಸ್ಪತ್ರೆಯ ಸಾಧನೆಯ ಹಿನ್ನೆಲೆಯಲ್ಲಿ ತುಂಬೆ ಗ್ರೂಪ್ ಅಜ್ಮಾನ್ ನ ಅಲ್ ಜುರ್ಫ್‌ನ ತುಂಬೆ ಮೆಡಿಸಿಟಿಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ತುಂಬೆ ಗ್ರೂಪ್ ಸಂಸ್ಥಾಪಕ ಅಧ್ಯಕ್ಷ ಡಾ.ತುಂಬೆ ಮೊಯ್ದಿನ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ತುಂಬೆ ಹೆಲ್ತ್ ಕೇರ್‌ನ ಉಪಾಧ್ಯಕ್ಷ ಅಕ್ಬರ್ ಮೊಯ್ದಿನ್ ತುಂಬೆ, ‘‘ಆರೋಗ್ಯವಂತ ಹಾಗೂ ಪ್ರಕಾಶಮಾನ ಭವಿಷ್ಯದ ಭರವಸೆಯನ್ನು ಪ್ರತಿನಿಧಿಸುವ ಪ್ರತಿ ಮಗುವಿನ ಬೆಳವಣಿಗೆಯಲ್ಲಿ ನೆರವಾಗಿರುವುದು ನಮ್ಮ ಪಾಲಿನ ಸವಲತ್ತು ಎಂದು ಭಾವಿಸಿದ್ದೇವೆ. ಈ ಮೈಲಿಗಲ್ಲು ಅಸಾಧಾರಣ ಆರೈಕೆಯನ್ನು ಒದಗಿಸುವ ಹಾಗೂ ಮುಂದಿನ ಪೀಳಿಗೆಯನ್ನು ಪೋಷಿಸುವ, ಪ್ರತಿ ಮಗುವಿಗೂ ಜೀವಿಸುವ ಅವಕಾಶವನ್ನು ಖಾತರಿಪಡಿಸುವ ನಮ್ಮ ಬದ್ಧತೆಯನ್ನು ಮರು ದೃಢೀಕರಿಸಿದೆ’’ ಎಂದರು.
ತುಂಬೆ ಯುನಿವರ್ಸಿಟಿ ಹಾಸ್ಪಿಟಲ್‌ನ ಪ್ರಸೂತಿ ಹಾಗೂ ಸ್ತ್ರೀರೋಗ ವಿಭಾಗವು ಪ್ರತಿ ವರ್ಷ ಅಂದಾಜು 35,000 ರೋಗಿಗಳಿಗೆ ಸೇವೆ ಒದಗಿಸುತ್ತಿದೆ. 10 ಅತ್ಯಾಧುನಿಕ ಪ್ರಸೂತಿ ಮತ್ತು ಹೆರಿಗೆ ಕೊಠಡಿಗಳು, ಪ್ರಸೂತಿ ಮತ್ತು ಸ್ತ್ರೀರೋಗಕ್ಕೇ ಮೀಸಲಾಗಿರುವ ತುರ್ತು ಚಿಕಿತ್ಸಾ ಘಟಕ ಹಾಗೂ ವಿಶೇಷ ಶಸ್ತ್ರಚಿಕಿತ್ಸಾ ಕೊಠಡಿಗಳನ್ನು ಹೊಂದಿದೆ. ಚೊಚ್ಚಲ ತಾಯಂದಿರಿಗೆ ಖಾಸಗಿ ಕೋಣೆಗಳೊಂದಿಗೆ ಪ್ರಸೂತಿ ನಂತರದ ವಾರ್ಡ್‌ಗಳಿದ್ದು, ಅವರ ಚೇತರಿಕೆ ಸಂದರ್ಭ ದಲ್ಲಿ ಆರಾಮದಾಯಕ ವಾತಾವರಣ ನೀಡುತ್ತದೆ.
ಆಸ್ಪತ್ರೆಯು ಮಿತ ದರದ ಹೆರಿಗೆ ಪ್ಯಾಕೇಜ್ ಒದಗಿಸುತ್ತಿದ್ದು, ಆ ಮೂಲಕ ಕುಟುಂಬಗಳಿಗೆ ಗುಣಮಟ್ಟದ ಅರೈಕೆಯನ್ನು ಒದಗಿಸುವ ಬದ್ಧತೆಯನ್ನು ಪ್ರದರ್ಶಿಸುತ್ತಿದೆ. ಹೆರಿಗೆ ಪ್ಯಾಕೇಜ್ ತಜ್ಞ ಸ್ತ್ರೀರೋಗ ವೈದ್ಯರೊಂದಿಗಿನ ಸಮಾಲೋಚನೆ, ಉಚಿತ ಹೆರಿಗೆ ಮುಂಗಡ ಕಾಯ್ದಿರಿಸುವಿಕೆ ಹಾಗೂ ಪ್ರಸವಪೂರ್ವ ತರಗತಿಗಳು ಒಳಗೊಂಡಿವೆ ಎಂದು ಪ್ರಕಟನೆ ತಿಳಿಸಿದೆ.