ಪ್ರಜ್ವಲ್ ರೇವಣ್ಣ ಪ್ರಕರಣ ಖಂಡಿಸಿ ಮೇ.30 ರಂದು ಹಾಸನದಲ್ಲಿ ಪ್ರತಿಭಟನೆ
ಮೈಸೂರು : ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ತಮ್ಮ ಅಧಿಕಾರ, ಕೌಟುಂಬಿಕ ಹಿನ್ನೆಲೆ, ಜಾತಿ ಪ್ರಾಬಲ್ಯ ಬಳಸಿಕೊಂಡು ನೂರಾರು ಮಹಿಳೆಯರನ್ನು ತನ್ನ ವಿಕೃತ ಕಾಮಕ್ಕೆ ಬಳಸಿಕೊಂಡ ಘಟನೆ ಖಂಡಿಸಿ ಇದೇ ಮೇ 30 ರಂದು ಹಾಸನದಲ್ಲಿ ಅಲ್ಲಿನ ಜಿಲ್ಲಾ ಜನಪರ ಚಳವಳಿಗಳ ಒಕ್ಕೂಟದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ತಿಳಿಸಿದೆ.
ಈ ಕುರಿತು ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಒಕ್ಕೂಟದ ಕೆ.ಆರ್.ಸುಮತಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಮೇ.30 ರಂದು ಬೆಳಗ್ಗೆ 10.30ಕ್ಕೆ ಅಲ್ಲಿನ ಹೇಮಾವತಿ ಪ್ರತಿಮೆ ಬಳಿ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿಪತ್ರ ಸಲ್ಲಿಸಲಿದೆ. ಈ ವೇಳೆ, ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಲು ರಾಜ್ಯ ಸರ್ಕಾರ ರೆಡ್ ಕಾರ್ನರ್ ನೋಟಿಸ್ ಹೊರಡಿಸಬೇಕು. ತ್ವರಿತವಾಗಿ ಆತನನ್ನು ದೇಶಕ್ಕೆ ಕರೆತರಬೇಕು. ಕೇಂದ್ರ ಸರಕಾರ ಆತನ ರಾಜತಾಂತ್ರಿಕ ಪಾಸ್‌ಪೋಟ್ ಮತ್ತು ವೀಸಾ ಕೂಡಲೇ ರದ್ದುಪಡಿಸಬೇಕು. ಆತನ ಬ್ಯಾಂಕ್ ಖಾತೆ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಈ ವೇಳೆ ಒತ್ತಾಯಿಸಲಾಗುವುದು.
ಅಲ್ಲದೆ, ವಿಕೃತ ಲೈಂಗಿಕ ಹಗರಣದ ವಿಡಿಯೋಗಳನ್ನು ಮತ್ತು ಪೆನ್ ಡ್ರೈವ್ ನಲ್ಲಿರುವ ಚಿತ್ರಣಗಳನ್ನು ವಿವಿಧ ಸಂವಹನ ಮಾಧ್ಯಮ ಮೂಲಕ ಹಂಚುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ವಿಶೇಷ ತನಿಖಾ ದಳವು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೇ ನಿಸ್ಪಕ್ಷಪಾತ, ಪಾರದರ್ಶಕ ತನಿಖೆ ನಡೆಸಿ, ಆರೋಪಿಗಳ ವಿರುದ್ದ ಕ್ರಮ ಜರುಗಿಸಲು ಸರ್ಕಾರಕ್ಕೆ ಸೂಚಿಸಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ಫೋರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ ವರದಿಯನ್ನು ಶೀಘ್ರವಾಗಿ ಬಿಡುಗಡೆಗೊಳಿಸಬೇಕು.
ಶಾಸಕ ರೇವಣ್ಣ ವಿರುದ್ಧವೂ ಲೈಂಗಿಕ ಕಿರುಕುಳ, ದೌರ್ಜನ್ಯದ ಪ್ರಕರಣ ದಾಖಲಾಗಿರುವ ಕಾರಣ ಶಾಸಕರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು. ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಹಾಸನಕ್ಕೆ ಭೇಟಿ ನೀಡಿ ದೌರ್ಜನ್ಯಕ್ಕೊಳಗಾದ ಮಹೀಳೆಯರಿಗೆ ಸಾರ್ವಜನಿಕವಾಗಿ ಸಾಂತ್ವನ ಹೇಳುವ ಮೂಲಕ ಆತ್ಮಸ್ಥೈರ್ಯ ತುಂಬಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿ.ಪಿ. ಬಸವರಾಜು, ಕೆ.ಆರ್. ಗೋಪಾಲಕೃಷ್ಣ, ಒಡನಾಡಿ ಸ್ಟ್ಯಾನ್ಲಿ,ಪ್ರೊ. ಭೂಮಿಗೌಡ, ಉಗ್ರ ನರಸಿಂಹೇಗೌಡ ಹಾಜರಿದ್ದರು.