ಸಕಲೇಶಪುರ | ರಾಷ್ಟ್ರೀಯ ಹೆದ್ದಾರಿ-75ರ ತಡೆಗೋಡೆ ಕುಸಿತ
ಹಾಸನ : ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಬುಧವಾರವೂ ಮಳೆ ಅಕ್ಷರಶಃ ಆರ್ಭಟಿಸುತ್ತಿದೆ. ಮಲೆನಾಡು ಭಾಗದಲ್ಲಂತೂ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಭಾರೀ ಮಳೆಗೆ ಸಕಲೇಶಪುರ ತಾಲೂಕು ಕೊಲ್ಲಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ-75ರ ತಡೆಗೋಡೆ ಕುಸಿದಿದೆ. ಸುಮಾರು 25 ಅಡಿಯಷ್ಟು ಮಣ್ಣು ಹಾಕಿ ತಡೆಗೋಡೆ ನಿರ್ಮಿಸಲಾಗಿತ್ತು. ಆದರೆ ಮಳೆಗೆ ಅದು ಕೊಚ್ಚಿ ಹೋಗಿದೆ.
ಹೆದ್ದಾರಿಗೆ ಹೊಂದಿಕೊಂಡಂತೆ 500 ಮೀಟರ್ ಉದ್ದದ ತಡೆಗೋಡೆ ಕುಸಿಯುತ್ತಿದ್ದು, ಮಳೆ ಹೆಚ್ಚಾದರೆ ಚತುಷ್ಪಥ ರಸ್ತೆಯ ಒಂದು ಭಾಗದ ಕಾಂಕ್ರಿಟ್ ರಸ್ತೆಯೇ ಕೊಚ್ಚಿ ಹೋಗುವ ಆತಂಕ ಎದುರಾಗಿದೆ.
ಮೈದುಂಬಿದ ಹಳ್ಳಕೊಳ್ಳ : ಮತ್ತೊಂದೆಡೆ ಭಾರೀ ಮಳೆಯಿಂದಾಗಿ ಹಳ್ಳ-ಕೊಳ್ಳ ಮೈದುಂಬಿಗೊಂಡಿದೆ. ಜಂಬರಡಿ ಸೇರಿ ಕೆಲವು ಕಡೆ ಮಳೆ ನೀರು ಸೇತುವೆ ಮೇಲೆಯೇ ಭಾರೀ ಪ್ರಮಾಣದಲ್ಲಿ ಉಕ್ಕಿ ಹರಿಯುತ್ತಿದೆ. ಇದರಿಂದ ಹಲವು ಗ್ರಾಮಗಳು ಸಂಪರ್ಕ ಕಡಿದುಕೊಂಡಿವೆ. ವೆಂಕಟಹಳ್ಳಿ-ರಾಗಿಗುಂಡಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಬೇರೆ ರಸ್ತೆಯಿಲ್ಲದೆ ಗ್ರಾಮಸ್ಥರು ಪರದಾಡುತ್ತಿದ್ದಾರೆ.
ಕೊಚ್ಚಿಹೋದ ಸೇತುವೆ: ವಾಡಿಕೆ ಮಳೆಗೆ ಸಕಲೇಶಪುರ ತಾಲೂಕು ಮಾರನಹಳ್ಳಿ ಬಳಿ ಎರಡು ತಿಂಗಳ ಹಿಂದಷ್ಟೇ ನಿರ್ಮಾಣವಾಗಿದ್ದ, ಮಾರನಹಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯ ಚೆಕ್ಪೋಸ್ಟ್ ಮುಂಭಾಗ ಮೊಣ್ಣಪ್ಪ ಎಂಬುವವರ ಮನೆಗೆ ತೆರಳಲು ನಿರ್ಮಾಣವಾಗಿದ್ದ ಕಿರುಸೇತುವೆ ಕೊಚ್ಚಿ ಹೋಗಿದೆ. ಇದರಿಂದ ಮನೆಯಲ್ಲಿ ವೃದ್ದ ದಂಪತಿ ಸಂಕಷ್ಟಕ್ಕೆ ಸಿಲುಕಿದ್ದಾರೆ.