ಹಾಸನ | ಪ್ರತ್ಯೇಕ ಪ್ರಕರಣ; ರಸ್ತೆ ಅಪಘಾತದಲ್ಲಿ ನಾಲ್ವರು ಮೃತ್ಯು

ಸಾಂದರ್ಭಿಕ ಚಿತ್ರ
ಹಾಸನ: ಜಿಲ್ಲೆಯ ವಿವಿಧೆಡೆ ನಡೆದ 4 ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ.
ಚನ್ನರಾಯಪಟ್ಟಣ ತಾಲೂಕು ಹಾಸನ-ಬೆಂಗಳೂರು ನಡುವಿನ ಹೆದ್ದಾರಿ 75 ರಗುಲಸಿಂದ ಗೇಟ್ ಬಳಿ ಲಾರಿಗೆ ಬೈಕ್ ಢಿಕ್ಕಿಹೊಡೆದು ಸವಾರ ಮೃತಪಟ್ಟಿದ್ದಾರೆ. ಅಚ್ಚುತೇಶ್ವರ ವೆಂಕಪ್ಪ ಗೊಲ್ಲರ್ (27) ಮೃತ ಯುವಕ. ಇವರು ಶುಕ್ರವಾರ ಬೈಕ್ನಲ್ಲಿ ಹೋಗುತ್ತಿದ್ದಾಗ ಮುಂದೆ ಸಂಚರಿಸುತ್ತಿದ್ದ ಲಾರಿ ಚಾಲಕ ಯಾವುದೇ ಸೂಚನೆ ನೀಡದೆ ಎಡಕ್ಕೆ ತಿರುಗಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಬೈಕ್ ಢಿಕ್ಕಿ ಹೊಡೆದಿದೆ. ಚನ್ನರಾಯಪಟ್ಟಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅರಸೀಕೆರೆ ತಾಲೂಕು ಗಂಡಸಿ ಹೋಬಳಿ ನಾಗೇನಹಳ್ಳಿ-ಕಮಲಾಪುರ ರಸ್ತೆಯಲ್ಲಿ ಜಾನುವಾರು ಅಡ್ಡಬಂದ ಪರಿಣಾಮ ಎರಡು ಬೈಕ್ಗಳ ನಡುವೆ ಢಿಕ್ಕಿ ಸಂಭವಿಸಿ ಒಬ್ಬರು ಮೃತಪಟ್ಟಿದ್ದಾರೆ. ರಂಗಾಪುರ ಗ್ರಾಮದ ಲೋಕೇಶ್ (42) ಮೃತಪಟ್ಟ ವ್ಯಕ್ತಿ. ಜಾವಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಘಟನೆಯಲ್ಲಿ ಕಾರು ಢಿಕ್ಕಿಯಾಗಿ ಬೈಕ್ ಸವಾರನೋರ್ವ ಮೃತಪಟ್ಟಿದ್ದಾನೆ. ತುಮಕೂರು ಮೂಲದ ಮಹ್ಮದ್ ಆಸೀಫ್ ಎಂಬವರು ಕಳೆದ ರಾತ್ರಿ ಕಾರೇಹಳ್ಳಿ ಗ್ರಾಮದ ಸಂಬಂಧಿಕರ ಮನೆಯಲ್ಲಿ ವರ್ಕ್ ಶಾಪ್ ಕೆಲಸ ಮಾಡಿಕೊಂಡಿದ್ದರು. ವರ್ಕ್ಶಾಪ್ನಿಂದ ಮಸೀದಿ ಹತ್ತಿರಕ್ಕೆ ಚನ್ನರಾಯಪಟ್ಟಣ ತಿಪಟೂರು ರಸ್ತೆಯ ಎಡಬದಿಯಲ್ಲಿ ಹೊಗುತ್ತಿರುವಾಗ ತಿಪಟೂರು ಮಾರ್ಗವಾಗಿ ಚನ್ನರಾಯಪಟ್ಟಣಕ್ಕೆ ಹೋಗಲು ಬರುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ನುಗ್ಗೇಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಅರಕಲಗೂಡು ತಾಲೂಕು ಬೆಟ್ಟಸೋಗೆ ಗ್ರಾಮದ ಸುನೀಲ್ ಎಂಬುವರು, ತೋಟದ ಕೆಲಸಕ್ಕೆಂದು ಹೋಗಿ ಕೆಲಸ ಮುಗಿಸಿಕೊಂಡು ಕಟ್ಟೆಪುರ ಏರಿಯ ನಾಲೆಯ ಮೇಲೆ ನಡೆದು ಕೊಂಡು ಹೋಗುತ್ತಿದ್ದಾಗ ಬಸವಾಪಟ್ಟಣ ಕಡೆಯಿಂದ ಬರುತ್ತಿದ್ದ ಟ್ರ್ಯಾಕ್ಟರ್ ಚಾಲಕ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಸುನಿಲ್ ಮೃತಪಟ್ಟಿದ್ದಾರೆ. ಕೊಣನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.