ಅರಸೀಕೆರೆ | ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಚಿರತೆ ಸೆರೆ
ಸೆರೆ ಸಿಕ್ಕಿ ಚಿರತೆ
ಅರಸೀಕೆರೆ : ಕೆಲ ದಿನಗಳಿಂದ ಅರಸೀಕೆರೆ ತಾಲ್ಲೂಕಿನ ಅಗ್ಗುಂದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ.
ಅಗ್ಗುಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೆಲವು ದಿನಗಳ ಹಿಂದೆ ಚಿರತೆ ಕಾಣಿಸಿಕೊಂಡು ರೈತರು ಭಯಗೊಂಡಿದ್ದರು. ರೈತರು ಹೊಲ, ಗದ್ದೆ, ತೋಟಗಳಿಗೆ ಓಡಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ತಾಲ್ಲೂಕಿನ ಬೊಮ್ಮೇನಹಳ್ಳಿ, ಸಿದ್ದರಹಳ್ಳಿ, ಶಂಕರನಹಳ್ಳಿ, ದಾಸಿಹಳ್ಳಿ, ಅಮ್ಮನ ಹಟ್ಟಿ ಮುಂತಾದ ಗ್ರಾಮಗಳ ರೈತರು ತಮ್ಮ ಜಮೀನುಗಳಲ್ಲಿ ಕೆಲಸ ಮಾಡಲು ಚಿರತೆಯ ಆತಂಕದಿಂದ ಹಿಂದೇಟು ಹಾಕುತ್ತಿದ್ದರು.
ಚಿರತೆ ಸಂಚಾರದ ಬಗ್ಗೆ ಗ್ರಾಮಸ್ಥರು ಕೆಲವು ದಿನಗಳ ಹಿಂದೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಅಗ್ಗುಂದ ಗ್ರಾಮದ ಮಹಾದೇವಯ್ಯ ಎಂಬುವರ ತೋಟದ ಮನೆಯಲ್ಲಿ ಬೋನನ್ನು ಇಟ್ಟಿದ್ದು, ಆ ಬೋನಿಗೆ ನಾಯಿಯನ್ನು ಕಟ್ಟಿದ್ದರು. ನಾಯಿಯ ತಿನ್ನುವ ಆಸೆಯಿಂದ ಬಂದ ಚಿರತೆಯು ಮಾಂಗಳವಾರ ಬೋನಿಗೆ ಬಿದ್ದಿದೆ ಎಂದು ತಿಳಿದು ಬಂದಿದೆ.