ಎಡಕುಮೇರಿ-ಕಡಗರಳ್ಳಿ ಮಧ್ಯೆ ಹಳಿ ಮೇಲೆ ಭೂಕುಸಿತದಿಂದ 14 ರೈಲುಗಳ ಸಂಚಾರ ರದ್ದು
ಆ.10ರ ವರೆಗೆ ಈ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತ?
ಹಾಸನ: ಶಿರಾಡಿ ಘಾಟ್ ನ ಮಂಗಳೂರು-ಬೆಂಗಳೂರು ರೈಲು ಮಾರ್ಗದ ಎಡಕುಮೇರಿ-ಕಡಗರಳ್ಳಿ ಮಧ್ಯೆ ಭೂಕುಸಿತ ಸಂಭವಿಸಿರುವುದರಿಂದ 14 ರೈಲುಗಳ ಸಂಚಾರ ರದ್ದಾಗಿದೆ. ಈ ನಡುವೆ ಹಳಿ ದುರಸ್ತಿ ಕಾರ್ಯ ಭರದಿಂದ ಸಾಗಿದೆ. ಸುಮಾರು 750ಕ್ಕೂ ಅಧಿಕ ಮಂದಿ ಕಾಮಗಾರಿ ನಡೆಸುತ್ತಿದ್ದಾರೆ. ಆದರೂ ಆಗಸ್ಟ್ 10ರವರೆಗೆ ಈ ಮಾರ್ಗದಲ್ಲಿ ರೈಲು ಸಂಚಾರ ಅಸಾಧ್ಯ ಎಂದು ರೈಲ್ವೆ ಮೂಲಗಳು ತಿಳಿಸಿವೆ.
ಹಳಿಯ ಕೆಳಭಾಗದಲ್ಲಿ ಭಾರಿ ಆಳಕ್ಕೆ ಮಣ್ಣು ಕುಸಿದಿದ್ದು, ಹಳಿಗೆ ಅಪಾಯ ಎದುರಾಗಿದೆ. ರೈಲ್ವೆ ಸಿಬ್ಬಂದಿ ಹಗಲಿರುಳು ದುರಸ್ತಿ ಕಾರ್ಯ ಕೈಗೊಂಡಿದ್ದರೂ ಸುರಿಯುತ್ತಿರುವ ಜಡಿಮಳೆ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಶುಕ್ರವಾರ ಸಂಜೆ ಭಾರೀ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿರುವುದರಿಂದ ಶನಿವಾರ ಹಾಗೂ ರವಿವಾರ ಕೂಡ ಹಲವು ರೈಲುಗಳು ಮಾರ್ಗ ಬದಲಾಯಿಸಿ ಸಂಚರಿಸಿವೆ. ಕೆಲವು ರೈಲುಗಳ ಸಂಚಾರ ರದ್ದುಪಡಿಸಲಾಗಿದೆ. ಇದರಿಂದಾಗಿ ಮಂಗಳೂರು-ಬೆಂಗಳೂರು ನಡುವೆ ಶಿರಾಡಿ ಮೂಲಕ ರೈಲು ಸಂಚಾರ ಸದ್ಯದ ಮಟ್ಟಿಗೆ ಕಷ್ಟ ಎನಿಸಿದೆ ಎಂದು ಹೇಳಲಾಗುತ್ತಿದೆ.
ಆಗಾಗ ಭಾರಿ ಪ್ರಮಾಣದಲ್ಲಿ ಸುರಿಯುವ ಮಳೆಗೆ ಗುಡ್ಡದ ಮಣ್ಣು ಮೆದುವಾಗಿರುವುದೇ ಭೂಕುಸಿತಕ್ಕೆ ಕಾರಣವೆಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಹಳಿಯ ತಳಮಟ್ಟವನ್ನು ಗಟ್ಟಿಗೊಳಿಸ ಬೇಕಾದರೆ 20 ವ್ಯಾಗನ್ ನಷ್ಟು ದೊಡ್ಡ ಬಂಡೆಗಳು ಬೇಕಾಗುತ್ತವೆ. ಪರ್ವತಗಳಿಗೆ ಹಾಕುವಂತಹ ಗೇಬಿಯನ್ ಮೆಷ್ ಅನ್ನು ಬೇಲಿ ರೀತಿ ಹಾಕಿ, ಬಂಡೆಗಳನ್ನು ತುಂಬುತ್ತಾ ಬರಬೇಕಿದೆ. ಆದರೆ, ಗುಡ್ಡದ ಮಣ್ಣು ಮೆತ್ತಗಾಗಿರುವುದರಿಂದ, ಈ ಮೆಷ್ ಹಾಕುವುದೂ ಕಷ್ಟವಾಗಿದೆ. ಹಗಲು-ರಾತ್ರಿ ನಿರಂತರ ಕೆಲಸ ಮಾಡಿದರೂ ರೈಲು ಮಾರ್ಗವನ್ನು ಸಹಜ ಸ್ಥಿತಿಗೆ ತರುವುದಕ್ಕೆ ಇನ್ನೂ 15 ದಿನ ಬೇಕಾಗಬಹುದು ಎಂದು ಹೇಳಲಾಗಿದೆ.
ಈ ಪ್ರದೇಶಕ್ಕೆ ಯಾವುದೇ ರಸ್ತೆ ಸಂಪರ್ಕ ಇಲ್ಲ, ದುರಸ್ತಿಗೆ ಬೇಕಾದ ಎಲ್ಲ ವಸ್ತುಗಳನ್ನು ರೈಲಿನ ವ್ಯಾಗನ್ ಮೂಲಕವೇ ತರಬೇಕಾಗುತ್ತದೆ. ಅದನ್ನು ತಂದರೂ ಕುಸಿತವಾದ ಜಾಗಕ್ಕೆ ತರಲಾಗದು. ಯಾಕೆಂದರೆ ಹಳಿಯ ಕೆಳಭಾಗದಲ್ಲಿ ಸ್ಥಿರತೆ ಇಲ್ಲದೆ ಹಳಿ ಬಾಗುವ, ಹಾನಿಗೊಳ್ಳುವ ಅಪಾಯವೂ ಇದೆ.
ಕಾರ್ಮಿಕರ ಅಳಲು:
ದುರಸ್ತಿ ಕಾರ್ಯಕ್ಕೆ ಉತ್ತರ ಕರ್ನಾಟಕ, ಸೇರಿದಂತೆ ಇದ್ದರೆ ಮೂಲದ ಕಾರ್ಮಿಕರು ಶ್ರಮಿಸುತ್ತಿದ್ದು ಇವರಿಗೆ ಸಾಕಾಗುವಷ್ಟು ಮೂಲ ಸೌಕರ್ಯಗಳು ದೊರೆಯುತ್ತಿಲ್ಲ ಎಂಬ ದೂರು ಕೇಳಿ ಬರುತ್ತಿದೆ.
ಪಟ್ಟಣಕ್ಕೆ ಆಗಮಿಸಿದ್ದ ಈ ಕಾರ್ಮಿಕರು ಸಾರ್ವಜನಿಕರೊಂದಿಗೆ ತಮ್ಮ ಅಳಲನ್ನು ಹೇಳಿಕೊಂಡು ನಮಗೆ ಊಟ, ವಿಶ್ರಾಂತಿ, ಶೌಚಾಲಯ ಸಂಬಂಧಿಸಿರುವಂತಹ ಯಾವುದೇ ಸೌಲಭ್ಯ ಗಳು ಅಲ್ಲಿ ಸಿಗುತ್ತಿಲ್ಲ ಇದರಿಂದಾಗಿ ನಾವು ಊರಿಗೆ ಮರಳಲು ನಿರ್ಧರಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಹಾಗಾದಲ್ಲಿ ದುರಸ್ತಿ ಕಾರ್ಯ ಮತ್ತಷ್ಟು ವಿಳಂಬವಾಗುವ ಸಂಭವವಿದೆ.
ಸಕಲೇಶಪುರ ತಾಲೂಕು ರೈಲು ಪ್ರಯಾಣಿಕರ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ನಾರಾಯಣ ಆಳ್ವ ಪತ್ರಿಕೆಯೊಂದಿಗೆ ಮಾತನಾಡಿ, ಶೀಘ್ರವಾಗಿ ದುರಸ್ತಿ ಕಾರ್ಯ ಪೂರ್ಣಗೊಳಿಸಬೇಕು. ಇದಕ್ಕಾಗಿ ಸರ್ವರೂ ಸಂಪೂರ್ಣ ಸಹಕಾರವನ್ನು ರೈಲು ಇಲಾಖೆಗೆ ನೀಡಬೇಕು. ಇದನ್ನು ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಿ ಜಿಲ್ಲಾಧಿಕಾರಿ ಇದರ ಬಗ್ಗೆ ಗಮನಹರಿಸಬೇಕು ಸಹಕರ ನೀಡಬೇಕು ಎಂದು ಮನವಿ ಮಾಡಿದ್ದಾರೆ.