ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಅಭ್ಯರ್ಥಿ ಶ್ರೇಯಸ್ ಪಟೇಲ್ ನಾಮಪತ್ರ ಸಲ್ಲಿಕೆ
ಹಾಸನ: ಎಪ್ರಿಲ್ 26 ರಂದು ನಡೆಯಲಿರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಶ್ರೇಯಸ್ ಪಟೇಲ್ ಅವರು ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಸಿ. ಸತ್ಯಭಾಮ ಅವರಿಗೆ ನಾಮಪತ್ರ ಸಲ್ಲಿಸಿದರು. ನಂತರ ಬೃಹತ್ ಮೆರವಣಿಗೆಯಲ್ಲಿ ಬಹಿರಂಗ ಭಾಷಣ ಮಾಡಿದರು.
ಸೋಮವಾರದಂದು ಮೊದಲ ಎರಡು ಸೆಟ್ ನಾಮಪತ್ರವನ್ನು ಗೃಹಸಚಿವ ಜಿ. ಪರಮೇಶ್ವರ್, ಸಹಕಾರ ಸಚಿವ ಕೆ.ಎನ್. ರಾಜಣ್ಣ, ರಾಜ್ಯ ಗೃಹಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ, ಮಾಜಿ ಸಚಿವ ಬಿ. ಶಿವರಾಮ್ ಉಪಸ್ಥಿತಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸಲ್ಲಿಕೆ ಮಾಡಲಾಯಿತು.
ನಗರದ ಡೈರಿ ವೃತ್ತದಿಂದ ಹೊರಟ ಬೃಹತ್ ಕಾಂಗ್ರೆಸ್ ಕಾರ್ಯಕರ್ತರ ಮೆರವಣಿಗೆಯಲ್ಲಿ ತೆರೆದ ವಾಹನದೊಳಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹಸಚಿವ ಜಿ. ಪರಮೇಶ್ವರ್, ಸಹಕಾರ ಸಚಿವ ಕೆ.ಎನ್. ರಾಜಣ್ಣ, ರಾಜ್ಯ ಗೃಹಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ, ಮಾಜಿ ಸಚಿವ ಬಿ. ಶಿವರಾಮ್, ಅಭ್ಯರ್ಥಿ ಶ್ರೇಯಸ್ ಪಟೇಲ್ ಹಾಗೂ ತಾಯಿ ಅನುಪಮಾ ಇತರರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರ ಚುನಾವಣೆಯ ಕುರಿತು ಜನತೆ ನೋಡುತ್ತಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮೊಮ್ಮಗನನ್ನು ಹಾಸನದಿಂದ ನಿಲ್ಲಿಸಿದರೆ, ಮಂಡ್ಯದಲ್ಲಿ ಮಗನನ್ನು ನಿಲ್ಲಿಸಿದ್ದಾರೆ. ತನ್ನ ಅಳಿಯನನ್ನು ಬಿಜೆಪಿಯಿಂದ ಬೆಂಗಳೂರು ಗ್ರಾಮಾಂತರದಲ್ಲಿ ನಿಲ್ಲಿಸಿದ್ದಾರೆ. ಒಂದೇ ಕುಟುಂಬದಿಂದ ಮೂವರು ನಿಲ್ಲಿಸಲಾಗಿದ್ದು, ಈ ಕ್ಷೇತ್ರಕ್ಕೆ ಬೇರೆ ಯಾರೂ ಇರಲಿಲ್ಲವೇ ಎಂದು ಪ್ರಶ್ನಿಸಿದರು.
ಗೃಹಸಚಿವ ಜಿ. ಪರಮೇಶ್ವರ್ ಮಾತನಾಡಿ, ಕಾಂಗ್ರೆಸ್ ಪಕ್ಷವು ಕಳೆದ 30 ವರ್ಷದ ಹಿಂದೆ ಹಾಸನ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಗೆದ್ದಿತ್ತು. ಈ ಬಾರಿ ನಿಮ್ಮೆಲ್ಲರ ಆಶೀರ್ವಾದದಿಂದ ಶ್ರೇಯಸ್ ಪಟೇಲ್ ಗೆಲ್ಲುತ್ತಾರೆ. ನಾವು ದೇಶದಲ್ಲಿ ಧರ್ಮ ಯುದ್ದಕ್ಕೆ ಕಾಲಿಡುತ್ತಿದ್ದು, ಕಾಂಗ್ರೆಸ್ ಪಕ್ಷ ಧರ್ಮದಿಂದ, ಜಾತಿಯಿಂದ ದೇಶವನ್ನು ಕಟ್ಟಿದೆ. ಆದರೆ ಇದೇ ದೇಶದಲ್ಲಿ ಬಿಜೆಪಿ ಧರ್ಮ, ಜಾತಿಗಳನ್ನು ಒಡೆಯುತ್ತಿದೆ ಎಂದು ದೂರಿದರು.
ಮೆರವಣಿಗೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ, ಕಾಂಗ್ರೆಸ್ ಎಂಪಿ ಅಭ್ಯರ್ಥಿ ಶ್ರೇಯಸ್ ಪಟೇಲ್, ಹಿರಿಯ ಕಾಂಗ್ರೆಸ್ ಮುಖಂಡ ಬಿ. ಶಿವರಾಂ, ಪಕ್ಷದ ಮುಖಂಡರಾದ ಹೆಚ್.ಕೆ. ಮಹೇಶ್, ಬನವಾಸೆ ರಂಗಸ್ವಾಮಿ, ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ, ಮುರುಳಿ ಮೋಹನ್, ಅಶೋಕ್, ಜಾವಗಲ್ ಮಂಜುನಾಥ್, ವಿನಯ್ ಗಾಂಧಿ ಇತರರು ಉಪಸ್ಥಿತರಿದ್ದರು.