ಚನ್ನರಾಯಪಟ್ಟಣ | ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ಮೃತ್ಯು

ಕೆರೆ ನೀರಲ್ಲಿ ಮುಳುಗಿ ಇಬ್ಬರು ಮೃತ್ಯು
ಚನ್ನರಾಯಪಟ್ಟಣ : ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ತಾಲೂಕಿನ ಜಿನ್ನಾಪುರ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ರಾಜಸ್ತಾನ ಮೂಲದ ಗಣೇಶ್(29), ರೋಹಿತ್ (28) ಎಂದು ಗುರುತಿಸಲಾಗಿದೆ.
ಗಣೇಶ್ ಮತ್ತು ರೋಹಿತ್ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದರು. ರವಿವಾರ (ಫೆ.02) ರಜೆ ಹಿನ್ನೆಲೆಯಲ್ಲಿ ಮದ್ಯಾಹ್ನದವರೆಗೂ ಕೆಲಸ ಮುಗಿಸಿ ಬಿಸಿಲು ಇದ್ದುದರಿಂದ ಈಜಲು ಜಿನ್ನಾಪುರ ಕೆರೆಗೆ ಹೋಗಿದ್ದಾರೆ. ಇಬ್ಬರಿಗೂ ಈಜು ಚನ್ನಾಗಿಯೇ ಗೊತ್ತಿತ್ತು.
ಆದರೆ ಇಬ್ಬರು ಗಿಡಗಂಟಿಗಳ ನಡುವೆ ಸಿಲುಕಿದ್ದರಿಂದ ಮೇಲೆ ಬರಲಾಗದೆ ಮೃತಪಟಿದ್ದಾರೆ ಎನ್ನಲಾಗಿದೆ. ಸಂಜೆಯಾದರೂ ಇಬ್ಬರು ಮನೆಗೆ ಬಾರದಿದ್ದರಿಂದ ಮನೆಯವರು ಹುಡುಕುತ್ತಾ ಕೆರೆ ಬಳಿ ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಕೂಡಲೇ ಸ್ಥಳೀಯರು ಸಮೀಪದ ಶ್ರವಣಬೆಳಗೊಳ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರ ನೆರವಿನಿಂದ ಮೃತದೇಹ ಹೊರತೆಗೆದಿದ್ದಾರೆ. ಮರಣೊತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ.