ಚನ್ನರಾಯಪಟ್ಟಣ | ಕೌಟುಂಬಿಕ ಕಲಹ : ತಾಯಿ, ಮಗ ಆತ್ಮಹತ್ಯೆ

ಚನ್ನರಾಯಪಟ್ಟಣ : ತಾಲ್ಲೂಕಿನ ಹಿರೀಸಾವೆ ಹೋಬಳಿಯ ಕಬ್ಬಳಿ ಗ್ರಾಮದಲ್ಲಿ ಕೌಟುಂಬಿಕ ಕಲಹದಿಂದ ಬೇಸತ್ತ ವ್ಯಕ್ತಿಯೋರ್ವ ಡೆತ್ ನೋಟ್ ಬರೆದಿಟ್ಟು, ತನ್ನ ತಾಯಿಯೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಕಬ್ಬಳಿ ಗ್ರಾಮದ ಭರತ್ (35) ಹಾಗೂ ತಾಯಿ ಜಯಂತಿ (60) ಮೃತಪಟ್ಟವರು ಎಂದು ತಿಳಿದುಬಂದಿದೆ.
ಭರತ್ ಗಂಡಸಿ ಹೋಬಳಿಯ ಬಾಗೂರನಹಳ್ಳಿ ಗ್ರಾಮದ ಗೀತಾ ಎಂಬುವರೊಂದಿಗೆ 8 ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು. ಆದರೆ ಪ್ರಾರಂಭದಿಂದಲೂ ಗಂಡ-ಹೆಂಡತಿ ನಡುವೆ ಹೊಂದಾಣಿಕೆ ಇರಲಿಲ್ಲ. ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಇತ್ತೀಚೆಗೆ ಗಂಡ ಹಾಗೂ ಅತ್ತೆಯೊಂದಿಗೆ ಜಗಳ ಮಾಡಿಕೊಂಡಿದ್ದ ಗೀತಾ ಗಂಡನ ಮನೆ ತೊರೆದು ತವರು ಮನೆಗೆ ಹೋಗಿದ್ದಳು. ಎರಡು ಬಾರಿ ರಾಜಿ ಪಂಚಾಯತ್ ಮಾಡಿ ಇಬ್ಬರನ್ನು ಒಂದು ಮಾಡಿದ್ದರು. ಆದರೆ ಸಂಸಾರ ಸರಿ ಹೋಗದೆ ದಿನನಿತ್ಯ ಗಲಾಟೆಯಾಗುತ್ತಿತ್ತು ಎಂದು ತಿಳಿದುಬಂದಿದೆ.
ಇದರಿಂದ ಮನನೊಂದು ತಾಯಿ ಹಾಗೂ ಮಗ ಕೆರೆಗೆ ಹಾರಿದ್ದಾರೆ ಎನ್ನಲಾಗಿದೆ. ಮನೆಯಲ್ಲಿ ಡೆತ್‌ನೋಟ್ ಅಕ್ಕಪಕ್ಕದ ಮನೆಯವರಿಗೆ ಸಿಕ್ಕಿದ್ದು ಅದರ ಆಧಾರದಡಿ ಕಟ್ಟೆಗೆ ತೆರಳಿ ಪರಿಶೀಲಿಸಿದಾಗ ಇಬ್ಬರ ಚಪ್ಪಲಿಗಳು ಸಿಕ್ಕಿವೆ. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರಗೆ ತೆಗೆದಿದ್ದಾರೆ ಎಂದು ತಿಳಿದುಬಂದಿದೆ.
ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ :
ಸೋಮವಾರ ಬೆಳಗಿನ ಜಾವ 3.15ರ ಸುಮಾರಿನಲ್ಲಿ ತಾಯಿ ಹಾಗೂ ಮಗ ಗ್ರಾಮದ ದೇಗುಲದ ಮುಂದೆ ಕೈ ಮುಗಿದು ಅಲ್ಲಿಂದ ಕಟ್ಟೆ ಕಡೆಗೆ ರಸ್ತೆಯಲ್ಲಿ ನಡೆದು ಹೋಗಿರುವ ದೃಶ್ಯ ಮನೆಯೊಂದರ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.