ಸಿದ್ದರಾಮಯ್ಯನವರ ಜೊತೆಗೆ ಈ ಬಂಡೆ ಸದಾ ಇರುತ್ತದೆ : ಡಿಸಿಎಂ ಡಿ.ಕೆ.ಶಿವಕುಮಾರ್
ಹಾಸನದಲ್ಲಿ ನಡೆದ ʼಕಾಂಗ್ರೆಸ್ ಜನಕಲ್ಯಾಣ ಸಮಾವೇಶʼ
ಡಿ.ಕೆ.ಶಿವಕುಮಾರ್
ಹಾಸನ : "ಈ ಬಂಡೆ ಸದಾ ಸಿದ್ದರಾಮಯ್ಯ ಅವರ ಜೊತೆಗೆ ಇರುತ್ತದೆ. ಇಂದು, ನಾಳೆ, ಎಂದೆಂದಿಗೂ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಅವರೊಂದಿಗೆ ಇರುತ್ತಾರೆ" ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಹಾಸನದಲ್ಲಿ ನಡೆದ ಕಾಂಗ್ರೆಸ್ ಜನಕಲ್ಯಾಣ ಸಮಾವೇಶದಲ್ಲಿ ಮಾತನಾಡಿದ ಅವರು, "ಕಾಂಗ್ರೆಸ್ ಸರಕಾರ ಐದು ಗ್ಯಾರಂಟಿಗಳು ಶಾಶ್ವತ, 2028ಕ್ಕೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದೂ ಖಂಡಿತ. ಬಿಜೆಪಿ–ಜೆಡಿಎಸ್ನವರ ಟೀಕೆಗಳಿಗೆ ರಾಜ್ಯದಲ್ಲಿ ನಡೆದ ಉಪ ಚುನಾವಣೆಯ ಮೂಲಕ ರಾಜ್ಯದ ಜನರು ಉತ್ತರ ನೀಡಿದ್ದಾರೆ. ಬಡವರಿಗೆ ಆರ್ಥಿಕ ಶಕ್ತಿ ತುಂಬುವ ಮೂಲಕ ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದ ಸಮಾಜಕ್ಕೆ ಶಕ್ತಿ ಕೊಟ್ಟಿದ್ದೇವೆ" ಎಂದು ಹೇಳಿದರು.
ನಾವು ಜನರ ಭಾವನೆ, ಧರ್ಮಗಳ ಮೇಲೆ ರಾಜಕಾರಣ ಮಾಡುವುದಿಲ್ಲ, ಜನರ ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ. ಅಧಿಕಾರ ಶಾಶ್ವತವಲ್ಲ, ಕಾಂಗ್ರೆಸ್ ಸಾಧನೆಗಳು ಅಜರಾಮರ. ಗ್ಯಾರಂಟಿಯ ಗೆಲುವಿನ, ನಂಬಿಕೆಯ ಸಮಾವೇಶ ಎಂದು ಹೇಳಿದರು.
ದೇವರಾಜ ಅರಸು ಕಾಲದಲ್ಲಿ ಊಳುವವನೇ ಭೂಮಿಯ ಒಡೆಯ ಯೋಜನೆ ತರಲಾಗಿತ್ತು. ಇಂದಿರಾ ಗಾಂಧಿ ಅವರ ಕಾಲದಲ್ಲಿ 20 ಅಂಶಗಳ ಕಾರ್ಯಕ್ರಮ ತರಲಾಗಿತ್ತು. ಮನಮೋಹನ್ ಸಿಂಗ್ ಅವರ ಕಾಲದಲ್ಲಿ ತಂತ್ರಜ್ಞಾನದ ಕ್ರಾಂತಿ, ಆಹಾರ ಭದ್ರತೆ ಕಾಯ್ದೆ, ಉದ್ಯೋಗ ಖಾತರಿ ಯೋಜನೆ ಜಾರಿಗೊಳಿಸಲಾಯಿತು. ಇವು ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಎಂದರು.
ನುಡಿದಂತೆ ನಡೆದಿದ್ದೇವೆ : ಲಕ್ಮೀ ಹೆಬ್ಬಾಳ್ಕರ್
ನಮ್ಮ ನಮ್ಮ ಸರಕಾರ ಅಧಿಕಾರಕ್ಕೆ ಬಂದ ಕೇವಲ 100 ದಿನಗಳಲ್ಲಿ, ಚುನಾವಣೆಗೂ ಮುನ್ನ ಘೋಷಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಕಾಂಗ್ರೆಸ್ ಪಕ್ಷದ ಇತಿಹಾಸವೇ ಹಾಗಿದೆ, ತ್ಯಾಗ, ಬಲಿದಾನಗಳಿಂದಲೇ ಕಟ್ಟಲ್ಪಟ್ಟಿರುವ ಪಕ್ಷ ನಮ್ಮದು. ಕೊಟ್ಟ ಮಾತಿನಿಂದ ಎಂದಿಗೂ ಹಿಂದೆ ಸರಿಯುವ ಪಕ್ಷ ನಮ್ಮದಲ್ಲ, ಬಿಜೆಪಿಯವರ ಹಾಗೆ ಸುಳ್ಳು ಹೇಳಿ ಎಂದೂ ಅಧಿಕಾರಕ್ಕೆ ಬಂದಿಲ್ಲ. ನಾವು ಕಾಂಗ್ರೆಸಿಗರು ಸದಾ ಬಡವರ ಪರವಾಗಿದ್ದೇವೆ. ನಮಗೆ ಬಡವರ, ದೀನ ದಲಿತರ, ಅಲ್ಪಸಂಖ್ಯಾತರ, ರೈತರ, ಕಾರ್ಮಿಕರ, ಮಹಿಳೆಯರ ಸಬಲೀಕರಣವೇ ಮುಖ್ಯವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಮೀ ಹೆಬ್ಬಾಳ್ಕರ್ ಹೇಳಿದರು.
ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೇರಿದಂತೆ ಎಲ್ಲ ಸಚಿವರು, ಶಾಸಕರು, ಮಾಜಿ ಸಚಿವರು ಮತ್ತು ಮಾಜಿ ಶಾಸಕರು, ಪಕ್ಷದ ಪದಾಧಿಕಾರಿಗಳು, ಮುಂಚೂಣಿ ಘಟಕಗಳ ಅಧ್ಯಕ್ಷರು, ಮುಖಂಡರು ಪಾಲ್ಗೊಂಡಿದ್ದರು.