ಹಾಸನ | ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ : ಇಬ್ಬರು ವಿದ್ಯಾರ್ಥಿಗಳು ಮೃತ್ಯು
ಸಾಂದರ್ಭಿಕ ಚಿತ್ರ
ಹಾಸನ : ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಕಾರಿನಲ್ಲಿದ್ದ ಐವರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪೈಕಿ ಇಬ್ಬರು ಮೃತಪಟ್ಟಿದ್ದು, ಮೂವರು ಗಾಯಗೊಂಡ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ ಗೌಡಗೆರೆ ಸಮೀಪ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಶನಿವಾರ ಸಂಜೆ ನಡೆದಿದೆ.
ಬೆಂಗಳೂರಿನ ಕಾಲೇಜೊಂದರ ಸೂರಜ್ (19), ಅನೀಶ್ (18) ಮೃತ ವಿದ್ಯಾರ್ಥಿಗಳು. ಭುವನ್ (18) ಸ್ಥಿತಿ ಗಂಭೀರವಾಗಿದ್ದು ಆತನನ್ನು ಬೆಳ್ಳೂರು ಕ್ರಾಸ್ನ ಬಿಜಿಎಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ವಿಶಾಲ್ (19), ಪೂರ್ಣಚಂದ್ರ (18) ಎಂಬ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚನ್ನರಾಯಪಟ್ಟಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ಐವರು ಕಾರಿನಲ್ಲಿ ಬೆಂಗಳೂರಿನಿಂದ ಮಂಗಳೂರು ಕಡೆಗೆ ಟ್ರಿಪ್ಗೆ ತೆರಳುತ್ತಿದ್ದರು. ಅತಿವೇಗದಿಂದ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಕಾರು ಪಲ್ಟಿಯಾಗಿ ಹಳ್ಳಕ್ಕೆ ಬಿದ್ದಿದೆ. ಈ ವೇಳೆ ಇಬ್ಬರು ಸಾವನ್ನಪ್ಪಿದ್ದು, ಮೂವರಿಗೆ ಗಾಯಗಳಾಗಿವೆ.
ಚನ್ನರಾಯಪಟ್ಟಣ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.