ಹಾಸನ: ರಸ್ತೆ ಮಧ್ಯೆ ಕೆಟ್ಟು ನಿಂತಿದ್ದ ಲಾರಿಗೆ ಕಾರು ಢಿಕ್ಕಿ; ಇಬ್ಬರು ಮೃತ್ಯು
ಹಾಸನ: ಫೆ,1: ರಸ್ತೆ ಮಧ್ಯೆ ಕೆಟ್ಟು ನಿಂತಿದ್ದ ಲಾರಿಗೆ ಹಿಂಬದಿಯಿಂದ ಕಾರು ಢಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಆಲೂರು ತಾಲ್ಲೂಕಿನ ಈಶ್ವರಹಳ್ಳಿ ಕೂಡಿಗೆ ಬಳಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಗುರುವಾರ ಮುಂಜಾನೆ ಸಂಭವಿಸಿದೆ.
ಮೃತರನ್ನು ಪ್ರದೀಪ್ (30), ಗುರು (25) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಮತ್ತಿಬ್ಬರಿಗೆ ಗಂಭೀರ ಗಾಯಗಳಾಗಿವೆ.
ರಸ್ತೆ ಮಧ್ಯೆ ಟೈರ್ ಪಂಕ್ಚರ್ ಆಗಿ ಟಿಂಬರ್ ತುಂಬಿದ್ದ ಲಾರಿಯೊಂದು ನಿಂತಿತ್ತು. ದಟ್ಟ ಮಂಜು ಆವರಿಸಿದ್ದರಿಂದ ಲಾರಿ ನಿಂತಿರುವುದು ಕಾರು ಚಾಲಕನ ಗಮನಕ್ಕೆ ಬಂದಿರಲಿಲ್ಲ. ವೇಗವಾಗಿ ಬಂದ ಕಾರು ಹಿಂದಿನಿಂದ ಲಾರಿಗೆ ಢಿಕ್ಕಿ ಹೊಡೆದು ಪಲ್ಟಿಯಾಗಿ ಬಿದ್ದಿದೆ. ಅಪಘಾತದ ತೀವ್ರತೆಗೆ ಕಾರಿನ ಟಾಪ್ ಸಂಪೂರ್ಣ ಕಿತ್ತು ಹೋಗಿದೆ.
ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಆಲೂರು ಠಾಣೆ ಪೊಲೀಸರು ಅಪಘಾತಕ್ಕೀಡಾದ ವಾಹನವನ್ನು ವಶಕ್ಕೆ ಪಡೆದು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
Next Story