ಹಾಸನ | ಜೀವವಿಮಾ ಪರಿಹಾರದ ಹಣಕ್ಕಾಗಿ ಮೃತಪಟ್ಟಿರುವಂತೆ ಬಿಂಬಿಸಿದ್ದ ಪ್ರಕರಣ : ಆರೋಪಿಯ ಬಂಧನ
ಹಾಸನ : ಜೀವವಿಮಾ ಸಂಸ್ಥೆಯಿಂದ ಪರಿಹಾರದ ಹಣ ಪಡೆಯಲು ಭಿಕ್ಷುಕನನ್ನು ಕೊಂದು ತಾನೇ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವಂತೆ ಬಿಂಬಿಸಿದ್ದ ಪ್ರಕರಣದಡಿ ಆರೋಪಿ ಹಾಗೂ ಆತನ ಪತ್ನಿಯನ್ನು ಅರಸೀಕೆರೆ ತಾಲೂಕಿನ ಗಂಡಸಿ ಠಾಣೆ ಪೊಲೀಸರು ಬಂಧಿಸಿರುವುದು ವರದಿಯಾಗಿದೆ.
ಬಂಧಿತ ದಂಪತಿಯನ್ನು ಹೊಸಕೋಟಿ ತಾಲೂಕಿನ ಚಿಕ್ಕಕೋಲಿಗ ಗ್ರಾಮದ ನಿವಾಸಿ ಮುನಿಶಾಮಿಗೌಡ ಹಾಗೂ ಶಿಲ್ಪಾ ರಾಣಿ ಎಂದು ಗುರುತಿಸಲಾಗಿದೆ. ಘಟನಾ ಸ್ಥಳದಲ್ಲಿದ್ದ ಕಾರು, ಕೊಲೆಗೆ ಬಳಸಿದ್ದ ಲಾರಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಕೊಲೆಗೈದಿದ್ದ ಭಿಕ್ಷುಕನ ಗುರುತು ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ವಿವರ: ಆ.12ರಂದು ಅರಸೀಕೆರೆ ತಾಲೂಕಿನ ಗೊಲ್ಲರಹೊಸಳ್ಳಿ ಗೇಟ್ ಬಳಿ ರಸ್ತೆಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತು. ಅದೇ ಸ್ಥಳದಲ್ಲಿ ಪಂಕ್ಚರ್ ಆಗಿದ್ದ ಕಾರು ಹಾಗೂ ಒಂದು ಲಾರಿ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಪಂಕ್ಚರ್ ಆಗಿದ್ದ ಕಾರಿನ ಟೈರ್ ಬದಲಿಸುತ್ತಿದ್ದ ವ್ಯಕ್ತಿಯ ಮೇಲೆ ಲಾರಿ ಹರಿದು ವ್ಯಕ್ತಿ ಮೃತಪಟ್ಟಿರುವಂತೆ ಕಂಡುಬಂದಿತ್ತು ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಗಂಡಸಿ ಪೊಲೀಸರು ಭೇಟಿ ನೀಡಿ ಅಪರಿಚಿತ ಮೃತದೇಹವನ್ನು ಹಾಸನ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದರು. ಮೃತದೇಹದ ಗುರುತು ಪತ್ತೆಗೆ ಮುಂದಾಗಿದ್ದರು. ಆ.13ರಂದು ಜಿಲ್ಲಾಸ್ಪತ್ರೆಗೆ ಬಂದಿದ್ದ ಶಿಲ್ಪ ರಾಣಿ ಎಂಬವರು ಈ ಮೃತದೇಹ ನನ್ನ ಪತಿ ಮುನಿಶಾಮಿಗೌಡರದ್ದು ಎಂದು ಗುರುತಿಸಿ ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ಕೊಂಡೊಯ್ದಿದ್ದ ಆಕೆ ಅಂದೇ ಹೊಸಕೋಟೆ ತಾಲೂಕಿನ ಚಿಕ್ಕಕೋಲಿಗೆ ಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದ್ದರು.
ಗಂಡಸಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು. ಮೃತ ವ್ಯಕ್ತಿಯ ಕುತ್ತಿಗೆಯಲ್ಲಿ ಗಾಯದ ಗುರುತು ಇದ್ದಿದ್ದರಿಂದ ಪ್ರಕರಣದ ಬಗ್ಗೆ ಅನುಮಾನಗೊಂಡು ಗಂಡಸಿ ಪೊಲೀಸರು ತನಿಖೆ ಆರಂಭಿಸಿ ಪ್ರಕರಣದ ಬಗ್ಗೆ ಎಸ್ಪಿ ಮುಹಮ್ಮದ್ ಸುಜೀತಾಗೆ ಮಾಹಿತಿ ನೀಡಿದ್ದರು.
ಮೃತಪಟ್ಟವನು ಮುನಿಶಾಮಿಗೌಡ ಅಲ್ಲ : ಬೆಂಗಳೂರು ಸಮೀಪದ ಹೊಸಕೋಟೆಯಲ್ಲಿ ಟೈರ್ ಮಾರಾಟಮಳಿಗೆ ಹೊಂದಿರುವ ಮುನಿಶಾಮಿಗೌಡ ಸಾಲ ಮಾಡಿಕೊಂಡಿದ್ದ. ಇದರಿಂದ ಪಾರಾಗಲು ಆತ ತನ್ನ ಮರಣಾನಂತರ ದೊರೆಯುವ ಜೀವವಿಮೆ ಹಣವನ್ನು ಬದುಕಿದ್ದಾಗಲೇ ಪಡೆಯಲು ಪತ್ನಿ ಜತೆ ಸೇರಿ ಭಿಕ್ಷುಕನನ್ನು ತನ್ನೊಂದಿಗೆ ಕಾರಿನಲ್ಲಿ ಕೂರಿಸಿಕೊಂಡು ಮಾರ್ಗಮಧ್ಯ ಗೊಲ್ಲರ ಹೊಸಳ್ಳಿ ಗೇಟ್ ಬಳಿ ಕಾರಿನ ಚಕ್ರ ಪಂಕ್ಚರ್ ಆಗಿದ್ದು ಚಕ್ರ ಬದಲಿಸುವಂತೆ ಭಿಕ್ಷುಕನಿಗೆ ಹೇಳಿದ್ದ, ಅದರಂತೆ ಆತ ಪಂಕ್ಚರ್ ಆದ ಚಕ್ರ ಬಿಚ್ಚಲು ಕುಳಿತಿದ್ದಾಗ ಆತನ ಕುತ್ತಿಗೆಗೆ ಚೈನ್ ಹಾಕಿ ಎಳೆದು ರಸ್ತೆಗೆ ಬೀಳಿಸಿದ್ದ. ಲಾರಿಯನ್ನು ಭಿಕ್ಷುಕನ ಮೇಲೆ ಹರಿಸಿ ಕೊಲೆಗೈದಿದ್ದ, ನಂತರ ಲಾರಿ, ಕಾರುಗಳನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದ ಮುನಿಶಾಮಿಗೌಡ ಅಜ್ಞಾತ ಸ್ಥಳದಲ್ಲಿ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.
ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿ ದಂಪತಿಯ ಸಂಚಿಗೆ ಬಲಿಯಾದ ಅಮಾಯಕನ ಗುರುತು ಇನ್ನೂ ಪತ್ತೆಯಾಗಬೇಕಾಗಿದೆ. ಲಾರಿ, ಕಾರು ವಶಕ್ಕೆ ಪಡೆದಿರುವ ಪೊಲೀಸರು ಲಾರಿ ಚಾಲಕನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.