ಹಾಸನ ಸಮಾವೇಶ | ʼಮುಡಾ ಹಗರಣʼದ ಹೆಸರಿನಲ್ಲಿ ವಿಪಕ್ಷದಿಂದ ಸಿಎಂ ಹೆಸರಿಗೆ ಕಳಂಕ ತರಲು ಯತ್ನ : ಲಕ್ಮೀ ಹೆಬ್ಬಾಳ್ಕರ್
ಲಕ್ಮೀ ಹೆಬ್ಬಾಳ್ಕರ್
ಹಾಸನ : "ರಾಜ್ಯದಲ್ಲಿ ಕಾಂಗ್ರೆಸ್ಸಿನ ಬಗ್ಗೆ ಮಾತನಾಡುವುದಕ್ಕೆ ಬಿಜೆಪಿ, ಜೆಡಿಎಸ್ನವರಿಗೆ ಯಾವ ನೈತಿಕತೆಯೂ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಕ್ಷುಲ್ಲಕ ವಿಷಯವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ" ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಹಾಸನದಲ್ಲಿ ಗುರುವಾರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಾಗೂ ಸ್ವಾಭಿಮಾನಿ ಒಕ್ಕೂಟಗಳ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ಬೃಹತ್ ಜನಕಲ್ಯಾಣ ಸಮಾವೇಶದಲ್ಲಿ ಪಾಲ್ಗೊಂಡು, ಸಾರ್ವಜನಿಕರನ್ನು ಉದ್ದೇಶಿಸಿ ಸಚಿವರು ಮಾತನಾಡಿದರು.
ಸಿಎಂ ವಿರುದ್ಧ ಒಳಸಂಚು :
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದ ನಾಲ್ಕು ದಶಕಗಳಿಂದ ಕಳಂಕರಹಿತ ರಾಜಕಾರಣ ಮಾಡುತ್ತಿದ್ದಾರೆ. ಆದರೆ, ಇಂತಹ ಮುಖ್ಯಮಂತ್ರಿಯವರಿಗೆ ಮುಡಾ ಹಗರಣದ ಹೆಸರಿನಲ್ಲಿ ಕಳಂಕ ತರಲು ವಿರೋಧ ಪಕ್ಷದವರು ಯತ್ನಿಸುತ್ತಿದ್ದಾರೆ. ಇದರ ಒಳಸಂಚೇನು ಎನ್ನುವುದು ಎಲ್ಲರಿಗೂ ತಿಳಿದಿದೆ ಎಂದು ಕಿಡಿಕಾರಿದರು.
ಬಿಜೆಪಿಯವರು ರಾಜ್ಯದಲ್ಲಿ ಅಧಿಕಾರದಲ್ಲಿರಲಿ, ಕೇಂದ್ರದಲ್ಲಿ ಅಧಿಕಾರದಲ್ಲಿರಲಿ, ವ್ಯವಸ್ಥೆಯನ್ನು ಬಳಸಿಕೊಂಡು ವಿರೋಧ ಪಕ್ಷದವರಿಗೆ ಕಿರುಕುಳ ನೀಡುವುದೇ ದಂಧೆಯಾಗಿದೆ. ಈಗ ಕೇಂದ್ರ ಸರಕಾರದ ಅಧೀನ ಸಂಸ್ಥೆಗಳಾದ ಸಿಬಿಐ, ಈಡಿಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಹಾಗಾಗಿ, ನಾವು ಒಗ್ಗಟ್ಟಿನಿಂದ ಸರಕಾರವನ್ನು ಸಮರ್ಥಿಸಿಕೊಳ್ಳುವ, ಬಿಜೆಪಿಯವರನ್ನು ಖಂಡಿಸುವ ಕೆಲಸ ಮಾಡಬೇಕಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಸಚಿವರು ಸಲಹೆ ನೀಡಿದರು.
ಬಿಜೆಪಿಗೆ ಮುಖ ತೋರಿಸಲಾಗದಂತಹ ಸ್ಥಿತಿ :
ಬಿಜೆಪಿಯವರು ನೂರು ಬಾರಿ ಸುಳ್ಳನ್ನು ಹೇಳಿ ಅದೇ ಸತ್ಯ ಎನ್ನುವಂತೆ ಬಿಂಬಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ, ಮೊದಲ ಸುಳ್ಳಿನಲ್ಲೇ ಅದನ್ನು ಖಂಡಿಸುವ, ಸುಳ್ಳೆಂದು ಸಾಬೀತುಪಡಿಸುವ ಕೆಲಸವನ್ನು ನಾವು ಮಾಡಬೇಕಿದೆ. ಬಿಜೆಪಿಗೆ ಈಗ ರಾಜ್ಯದಲ್ಲಿ ಶಕ್ತಿ ಇಲ್ಲವಾಗಿದೆ, ಮಾತನಾಡಲು ಯಾವುದೇ ವಿಷಯಗಳು ಇಲ್ಲವಾಗಿದೆ. ತನ್ನ ಒಳಜಗಳದಿಂದಾಗಿ ಜನರಿಗೆ, ಕಾರ್ಯಕರ್ತರಿಗೆ ಮುಖ ತೋರಿಸಲಾಗದಂತಹ ಸ್ಥಿತಿ ಬಿಜೆಪಿ ನಾಯಕರಿಗಾಗಿದೆ. ಆದರೂ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ನುಡಿದಂತೆ ನಡೆದಿದ್ದೇವೆ :
ನಮ್ಮ ನಮ್ಮ ಸರಕಾರ ಅಧಿಕಾರಕ್ಕೆ ಬಂದ ಕೇವಲ 100 ದಿನಗಳಲ್ಲಿ, ಚುನಾವಣೆಗೂ ಮುನ್ನ ಘೋಷಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಕಾಂಗ್ರೆಸ್ ಪಕ್ಷದ ಇತಿಹಾಸವೇ ಹಾಗಿದೆ, ತ್ಯಾಗ, ಬಲಿದಾನಗಳಿಂದಲೇ ಕಟ್ಟಲ್ಪಟ್ಟಿರುವ ಪಕ್ಷ ನಮ್ಮದು. ಕೊಟ್ಟ ಮಾತಿನಿಂದ ಎಂದಿಗೂ ಹಿಂದೆ ಸರಿಯುವ ಪಕ್ಷ ನಮ್ಮದಲ್ಲ, ಬಿಜೆಪಿಯವರ ಹಾಗೆ ಸುಳ್ಳು ಹೇಳಿ ಎಂದೂ ಅಧಿಕಾರಕ್ಕೆ ಬಂದಿಲ್ಲ. ನಾವು ಕಾಂಗ್ರೆಸಿಗರು ಸದಾ ಬಡವರ ಪರವಾಗಿದ್ದೇವೆ. ನಮಗೆ ಬಡವರ, ದೀನ ದಲಿತರ, ಅಲ್ಪಸಂಖ್ಯಾತರ, ರೈತರ, ಕಾರ್ಮಿಕರ, ಮಹಿಳೆಯರ ಸಬಲೀಕರಣವೇ ಮುಖ್ಯವಾಗಿದೆ ಎಂದು ಹೇಳಿದರು.
ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೇರಿದಂತೆ ಎಲ್ಲ ಸಚಿವರು, ಶಾಸಕರು, ಮಾಜಿ ಸಚಿವರು ಮತ್ತು ಮಾಜಿ ಶಾಸಕರು, ಪಕ್ಷದ ಪದಾಧಿಕಾರಿಗಳು, ಮುಂಚೂಣಿ ಘಟಕಗಳ ಅಧ್ಯಕ್ಷರು, ಮುಖಂಡರು ಪಾಲ್ಗೊಂಡಿದ್ದರು.