ಹಾಸನ | ತಂದೆಯ ಕೊಲೆ ಆರೋಪಿಯ ಬರ್ಬರ ಹತ್ಯೆ: ಆರೋಪಿ ಪುತ್ರನ ಬಂಧನ
ಸಾಂದರ್ಭಿಕ ಚಿತ್ರ
ಹಾಸನ: ಅರಕಲಗೂಡು ತಾಲೂಕು ದಡದಹಳ್ಳಿಯಲ್ಲಿ ಮಂಗಳವಾರ ನಡೆದಿದ್ದ ವೃದ್ದ ನಿರ್ವಾಣಪ್ಪನ ಬರ್ಬರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ದಡದಹಳ್ಳಿ ಗ್ರಾಮದ ನಿವಾಸಿ ಲಕ್ಕಪ್ಪ ಎಂಬವರ ಪುತ್ರ ಮೂರ್ತಿ ಅಲಿಯಾಸ್ ಗುಂಡ ಬಂಧಿತ ಆರೋಪಿ. ತನ್ನ ತಂದೆಯ ಕೊಲೆಗೆ ಪ್ರತೀಕಾರ ತೀರಿಸಲು ಈತ ಈ ಹತ್ಯೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
2011ರಲ್ಲಿ ನಿರ್ವಾಣಪ್ಪ ತನ್ನ ಸಹೋದರನ ಮೇಲೆ ಕೊಲೆ ಆರೋಪ ಹೊರಿಸುವುದಕ್ಕಾಗಿ ತನ್ನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಅದೇ ಗ್ರಾಮದ ಲಕ್ಕಪ್ಪರನ್ನು ಕೊಲೆ ಮಾಡಿ ಮೃತದೇಹವನ್ನು ಸಹೋದರನ ಮನೆಯ ಕಾಂಪೌಂಡ್ ಒಳಗೆ ಮೃತದೇಹ ಎಸೆದಿದ್ದ ಪ್ರಕರಣದ ಆರೋಪಿಯಾಗಿ ಜೈಲು ಸೇರಿದ್ದ.
ಈ ಪ್ರಕರಣದಲ್ಲಿ ಏಳು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ನಿರ್ವಾಣಪ್ಪ, ಕೆಲ ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದ. ಆ ಬಳಿಕ ಕೊಲೆಯಾಗಿದ್ದ ಲಕ್ಕಪ್ಪನ ಮಕ್ಕಳ ಭೀತಿಯಿಂದ ನಿರ್ವಾಣಪ್ಪ ದಡದಹಳ್ಳಿ ಗ್ರಾಮಕ್ಕೆ ಬಾರದೆ ಸಮೀಪದ ಮಲ್ಲಿಪಟ್ಟಣ ಗ್ರಾಮದಲ್ಲಿ ವಾಸವಿದ್ದ.
ಮಂಗಳವಾರ ಮಧ್ಯಾಹ್ನ ತನ್ನ ತಂದೆಯ ಮರಣ ಪ್ರಮಾಣ ಪತ್ರ ಪಡೆಯಲು ದಡದಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಬಂದಿದ್ದ ನಿರ್ವಾಣಪ್ಪನನ್ನು ಆರೋಪಿ ಮೂರ್ತಿ ಹಾಡಹಗಲೇ ಗ್ರಾಮದ ನಡುರಸ್ತೆಯಲ್ಲೇ ಮಚ್ಚಿನಿಂದ ಕೊಚ್ಚಿ ಕೊಲೆಗೈದ ಬಗ್ಗೆ ಪೊಲೀಸ್ ದೂರು ದಾಖಲಾಗಿತ್ತು.
ಈ ಬಗ್ಗೆ ಸಿಪಿಐ ಕೆ.ಎಂ.ವಸಂತ್ ನೇತೃತ್ವದ ತಂಡ ತಕ್ಷಣ ಕಾರ್ಯಪ್ರವೃತ್ತವಾಗಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದೆ.