ಹಾಸನ | ಷೇರು ಮಾರುಕಟ್ಟೆ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ : ಪ್ರಕರಣ ದಾಖಲು
ಹಾಸನ : ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ನಿಮಗೆ ದುಪ್ಪಟ್ಟು ಹಣ ಕೊಡುವುದಾಗಿ ನಂಬಿಸಿ ವಿವಿಧ ಖಾತೆಗಳಿಗೆ ಸುಮಾರು 14 ಬಾರಿ ಹಣ ವರ್ಗಾವಣೆ ಮಾಡಿಸಿಕೊಂಡು ಬರೋಬ್ಬರಿ 20 ಲಕ್ಷ ರೂ.ಗೆ ವಂಚಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ಸಂಬಂಧ ಹಣ ಕಳೆದುಕೊಂಡವರು ಹಾಸನದ ಸೆನ್ ಠಾಣೆಗೆ ದೂರು ನೀಡಿದ್ದಾರೆ. ಕಳೆದ ಫೆ.20ರಂದು ತಮ್ಮ ಮೊಬೈಲ್‌ಗೆ ಅಪರಿಚಿತ ವ್ಯಕ್ತಿಯೊಬ್ಬರು ಅಂಜನಾ ಕಪೂರ್ ಎಂಬ ಹೆಸರು ಹೇಳಿಕೊಂಡು ವಾಟ್ಸಾಪ್ ಮೂಲಕ ಲಿಂಕ್ ವೊಂದನ್ನು ಕಳುಹಿಸಿದ್ದ. ಅದರಲ್ಲಿ ಷೇರು ಮಾರುಕಟ್ಟೆಗೆ ಸಂಬಂಧಿಸಿದಂತೆ ಹಣವನ್ನು ಹೂಡಿಕೆ ಮಾಡಿದರೆ ನಿಮಗೆ ದುಪ್ಪಟ್ಟು ಹಣ ಕೊಡುವುದಾಗಿ ನಂಬಿಸಿದ್ದ ಎನ್ನಲಾಗಿದೆ.
ಇದನ್ನು ನಂಬಿದ ವ್ಯಕ್ತಿಯು ಮಾ.30 ರಿಂದ ಮೇ 14 ರವರೆಗೂ ಒಟ್ಟು 14 ಬಾರಿಯಂತೆ 19,85, 380 ರೂ.ಗಳನ್ನು ಅಪರಿಚಿತ ವ್ಯಕ್ತಿಯು ತಿಳಿಸಿದ ವಿವಿಧ ಖಾತೆಗಳಿಗೆ ಜಮೆ ಮಾಡಿದ್ದಾರೆ. ಬಳಿಕ ಅಪರಿಚಿತ ವ್ಯಕ್ತಿಯು ಯಾವುದೇ ಹಣವನ್ನು ಹಿಂತಿರುಗಿಸದೆ ಇಲ್ಲಸಲ್ಲದ ಸಬೂಬು ನೀಡಿದ್ದಾನೆ ಎಂದು ಹೇಲಲಾಗಿದೆ. ಇದರಿಂದ ಮೋಸ ಹೋಗಿರುವುದನ್ನು ಅರಿತ ವ್ಯಕ್ತಿಯು ಸೆನ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.