ಹಾಸನ| ಕಾಡಾನೆ ದಾಳಿಯಿಂದ ಮೃತಪಟ್ಟ ವಸಂತ್ ಮನೆಗೆ ಭೇಟಿ ನೀಡಿದ ಸಚಿವ ಕೆ.ಎನ್ ರಾಜಣ್ಣ
ಅರೇಹಳ್ಳಿ: ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿಯ ಮತ್ತಾವರ ಗ್ರಾಮದಲ್ಲಿ ಜ.04 ರ ಗುರುವಾರ ರಾತ್ರಿ ಆನೆ ದಾಳಿಯಿಂದ ಮೃತಪಟ್ಟ ವಸಂತ್ ರವರ ಮನೆಗೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ ಭೇಟಿ ನೀಡಿದರು.
ಶನಿವಾರ ಬೆಳಗ್ಗೆ ಮತ್ತಾವರ ಗ್ರಾಮಕ್ಕೆ ಆಗಮಿಸಿ ಸಾರ್ವಜನಿಕರು ಹಾಗೂ ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿದರು.
"ಆನೆ ಬಹಳ ಸೂಕ್ಷ್ಮ ಪ್ರಾಣಿಯಾಗಿರುವುದರಿಂದ ಮನೆ ಬಳಿಯೆ ಬಂದು ಸದ್ದು ಮಾಡದೆ ದಾಳಿ ಮಾಡುತ್ತಿದೆ. ಆದ್ದರಿಂದ ಎಲ್ಲ ಕಾಡಾನೆಗಳನ್ನು ಬೇರೆಡೆಗೆ ಶಾಶ್ವತವಾಗಿ ಸ್ಥಳಾಂತರ ಮಾಡಬೇಕು. ವಸಂತ್ ರವರಿಗೆ ಪತ್ನಿ, 2 ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗನಿದ್ದು ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಹಾಗಾಗಿ ಈ ಬಡ ಕುಟುಂಬಕ್ಕೆ ಸರಕಾರದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಒದಗಿಸಿಕೊಡಬೇಕು" ಎಂದು ಗ್ರಾಮಸ್ಥರು ಸಚಿವರಿಗೆ ಮನವಿ ಮಾಡಿದರು.
ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಉಸ್ತುವಾರಿ ಸಚಿವರು, "ಜಿಲ್ಲೆಯಾದ್ಯಂತ ಆನೆ ದಾಳಿಯಿಂದ ಮೃತಪಟ್ಟಂತಹವರು ಜಮೀನು ರಹಿತರಾಗಿದ್ದರೆ ಜೀವನ ಸಾಗಿಸುವುದು ಕಷ್ಟವಾಗುತ್ತದೆ. ಆದ್ದರಿಂದ ಇಂತಹ ದುರ್ಘಟನೆಗಳನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಸರಕಾರಿ ಭೂಮಿಯನ್ನು ಗುರುತಿಸಿ ನೊಂದ ಬಡ ಕುಟುಂಬಗಳಿಗೆ ಹಂಚಲು ಕ್ರಮ ಕೈಗೊಳ್ಳಿ" ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.
ಈ ವೇಳೆ ಶಾಸಕ ಹುಲ್ಲಳ್ಳಿ ಸುರೇಶ್, ಜಿಲ್ಲಾಧಿಕಾರಿ ಸತ್ಯಭಾಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುಹಮ್ಮದ್ ಸುಜೀತಾ, ತಹಸೀಲ್ದಾರ್ ಎಂ.ಮಮತ, ಬಿ.ಶಿವರಾಂ,ಇ.ಹೆಚ್ ಲಕ್ಷ್ಮಣ್, ಎಂ.ಆರ್ ವೆಂಕಟೇಶ್, ಹರೀಶ್ ಮತ್ತಾವರ ಸೇರಿದಂತೆ ಹಲವರಿದ್ದರು.