ಹಾಸನ| ಪುರಸಭೆ ಉಪ ಚುನಾವಣೆ: ಜೆಡಿಎಸ್ ಭದ್ರಕೋಟೆಯಲ್ಲಿ ಪ್ರಾಬಲ್ಯ ಮೆರೆದ ಕಾಂಗ್ರೆಸ್
ಹಾಸನ: ಜಿಲ್ಲೆಯ 3 ಪುರಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 2 ರಲ್ಲಿ ಗೆಲವು ಸಾಧಿಸಿದರೆ, ಜೆಡಿಎಸ್ 1 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಆ ಮೂಲಕ ಜೆಡಿಎಸ್ ಭದ್ರ ಕೋಟೆಯಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮೆರೆದಿದೆ.
ಸಕಲೇಶಪುರ ಮತ್ತು ಹೊಳೆನರಸೀಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಚನ್ನರಾಯಪಟ್ಟಣದಲ್ಲಿ ಮಾತ್ರ ಜೆಡಿಎಸ್ ಗೆದ್ದಿದೆ.
ಸಕಲೇಶಪುರದ 7 ನೇ ವಾರ್ಡ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರೇಷ್ಮಾ ಬಾನು ಹಾಗೂ ಹೊಳೆನರಸೀಪುರ ಪಟ್ಟಣದ ವಾರ್ಡ್ 11ರಲ್ಲಿ ಕಾಂಗ್ರೆಸ್ ನ ಬೈರ ಶೆಟ್ಟಿ ಗೆಲುವನ್ನು ಸಾಧಿಸಿದರೆ, ಚನ್ನರಾಯಪಟ್ಟಣ ಪುರಸಭೆ ವಾರ್ಡ್ 8 ರಲ್ಲಿ ಜೆಡಿಎಸ್ ಅಭ್ಯರ್ಥಿ ರಾಮಕೃಷ್ಣ ವಿಜಯದ ನಗೆ ಬೀರಿದ್ದಾರೆ.
ಸಕಲೇಶಪುರ ಪುರಸಭೆ 7ನೇ ವಾರ್ಡ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರೇಷ್ಮಾ ಬಾನು ಅವರು ಜೆಡಿಎಸ್ ನ ಅರುಣಾ ಬಾರ್ಗವಿ ವಿರುದ್ಧ15 ಮತಗಳ ಅಂತರದಲ್ಲಿ ಗೆಲುವನ್ನು ಸಾಧಿಸಿದ್ದಾರೆ.
ಚನ್ನರಾಯಪಟ್ಟಣ ಪುರಸಭೆ 8 ನೇ ವಾರ್ಡ್ ಗೆ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ರಾಮಕೃಷ್ಣ ಸುಮಾರು 153 ಮತಗಳ ಅಂತರದಿಂದ ಜಯಶೀಲರಾಗಿದ್ದಾರೆ.
ಸಕಲೇಶಪುರ ಚುನಾವಣೆ ಬಾರಿ ಕುತೂಹಲಕ್ಕೆ ಕಾರಣವಾಗಿತ್ತು. ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಕಣಕ್ಕಿಳಿದು, ಕಾಂಗ್ರೆಸ್ ಸೋಲಿಸಲು ಮುಂದಾದರೂ, ಕಾಂಗ್ರೆಸ್ ಗೆಲುವು ಸಾಧಿಸಿದೆ.