ಹಾಸನ: ಎರಡು ಕಾರುಗಳು ಮುಖಾಮುಖಿ ಢಿಕ್ಕಿ; ಓರ್ವ ಮೃತ್ಯು
ಹಾಸನ: ಸ್ಯಾಂಟ್ರೊ ಮತ್ತು ಮಾರುತಿ ಸ್ವಿಫ್ಟ್ ಕಾರುಗಳು ಮುಖಾಮುಖಿ ಢಿಕ್ಕಿಯಾಗಿ ಒಬ್ಬರು ಮೃತಪಟ್ಟಿದ್ದು ಇನ್ನೊಬ್ಬರು ತೀವ್ರ ಗಾಯಗೊಂಡಿರುವ ಘಟನೆ ಬೇಲೂರು ಪಟ್ಟಣದ ಹೊಸನಗರ ತಿರುವಿನಲ್ಲಿ ಶನಿವಾರ ನಡೆದಿದೆ.
ಮೃತ ವ್ಯಕ್ತಿಯನ್ನು ಬೇಲೂರು ತಾಲೂಕು ಐರವಳ್ಳಿ ಗ್ರಾಮದ ಮನೋಜ್( 26) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಇನ್ನೊಬ್ಬ ಕಾರಿನ ಚಾಲಕ ಕಿಶನ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಸ್ಯಾಂಟ್ರೋ ಕಾರು ಹಾಸನಕ್ಕೆ ಹೋಗುತ್ತಿದ್ದು ಸ್ವಿಫ್ಟ್ ಕಾರು ಹಾಸನದಿಂದ ಬೇಲೂರಿಗೆ ಬರುವ ಸಂದರ್ಭ ಹೊಸನಗರ ತಿರುವಿನಲ್ಲಿ ಚಾಲಕರ ನಿಯಂತ್ರಣ ತಪ್ಪಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಬೇಲೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಿರುವಿನಲ್ಲಿ ಹಂಪ್ ಗಳು ಇಲ್ಲದೆ ಇರುವುದು ರಸ್ತೆ ಅಪಘಾತಗಳು ಮರುಕಳಿಸಲು ಮುಖ್ಯ ಕಾರಣವಾಗಿದೆ. ಆದ್ದರಿಂದ ತಕ್ಷಣವೇ ರಸ್ತೆ ಪ್ರಾಧಿಕಾರ ಹಂಪ್ಸ ಗಳನ್ನು ನಿರ್ಮಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.
ಘಟನಾ ಸ್ಥಳಕ್ಕೆ ಆಗಮಿಸಿದ ಪುರಸಭೆ ಅಧ್ಯಕ್ಷೆ ಮೀನಾಕ್ಷಿ ವೆಂಕಟೇಶ್, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟು ಹಂಪ್ ನಿರ್ಮಾಣದ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿ ತ್ವರಿತವಾಗಿ ಹಂಪ್ಸ್ ನಿರ್ಮಾಣ ಮಾಡುವುದಾಗಿ ಮನವೊಲಿಸಿದರು.