ಹಾಸನ | ವ್ಯವಹಾರ ವೈಷಮ್ಯ ಶಂಕೆ : ಪಾಲುದಾರನನ್ನು ಗುಂಡಿಕ್ಕಿ ಕೊಂದು ಉದ್ಯಮಿ ಆತ್ಮಹತ್ಯೆ
ಹಾಸನ : ವ್ಯವಹಾರದ ವೈಷಮ್ಯದ ಹಿನ್ನೆಲೆಯಲ್ಲಿ ತನ್ನ ಪಾಲುದಾರನನ್ನು ಗುಂಡು ಹಾರಿಸಿ ಕೊಂದು ಬಳಿಕ ಅದೇ ರಿವಾಲ್ವರ್‌ನಿಂದ ಗುಂಡು ಹಾರಿಸಿ ಉದ್ಯಮಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಗರದ ಹೊಯ್ಸಳ ನಗರ ಬಡಾವಣೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ರಿಯಲ್ ಎಸ್ಟೇಟ್ ಉದ್ಯಮಿ ಶರಾಫತ್ ಅಲಿ (52) ಕೊಲೆಯಾದ ವ್ಯಕ್ತಿಯಾಗಿದ್ದು, ಆಸಿಫ್ ಆತ್ಮಹತ್ಯೆ ಮಾಡಿಕೊಂಡ ಉದ್ಯಮ ಪಾಲುದಾರ ಎಂದು ತಿಳಿದು ಬಂದಿದೆ.
ಬೆಂಗಳೂರು ಮೂಲದ ಉದ್ಯಮಿ ಆಸಿಫ್ ಅಲಿ ತನ್ನ ವ್ಯವಹಾರ ನಷ್ಟವಾದ ಬಳಿಕ ಹಾಸನದ ಅಡುವಳ್ಳಿ ನಿವಾಸಿ, ರಿಯಲ್ ಎಸ್ಟೇಟ್ ಮತ್ತು ಶುಂಠಿ ಉದ್ಯಮಿ ಶರಾಫತ್ ಅಲಿ ಜೊತೆ ಸೇರಿದ್ದ. ಬಳಿಕ ಇಬ್ಬರೂ ಪಾಲುದಾರಿಕೆಯಲ್ಲಿ ರಿಯಲ್ ಎಸ್ಟೇಟ್ ಸಹಿತ ಕೆಲವು ಉದ್ಯಮಗಳನ್ನು ನಡೆಸುತ್ತಿದ್ದರೆಂದು ಹೇಳಲಾಗಿದೆ. ಈ ನಡುವೆ ಆಸಿಫ್‌ಗೆ ಮತ್ತಷ್ಟು ಹಣಕಾಸಿನ ಅಗತ್ಯತೆ ಇದ್ದು, ಶರಾಫತ್ ಬಳಿ ಕೇಳಿಕೊಂಡಿದ್ದ ಎನ್ನಲಾಗಿದೆ. ಆದರೆ ಶರಾಫತ್ ಹಣ ನೀಡದ ಹಿನ್ನೆಲೆಯಲ್ಲಿ ಅವರಿಬ್ಬರ ನಡುವೆ ಬಿರುಕು ಮೂಡಿತ್ತೆಂದು ಹೇಳಲಾಗುತ್ತಿದೆ.
ಗುರುವಾರ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನಿವೇಶನವೊಂದರ ನೋಂದಣಿ ಇದ್ದ ಹಿನ್ನೆಲೆಯಲ್ಲಿ ಶರಾಫತ್ ಮನೆಯಿಂದಲೇ ಇಬ್ಬರೂ ಕಾರಿನಲ್ಲಿ ಹೊರಟಿದ್ದರು. ಈ ನಡುವೆ ಮಧ್ಯಾಹ್ನದ ವೇಳೆಗೆ ಅವರು ಇಬ್ಬರ ಒಡೆತನದಲ್ಲಿರುವ ಸೈಟ್ ಬಳಿ ತೆರಳಿದ್ದಾರೆ ಎನ್ನಲಾಗಿದೆ. ಅಲ್ಲಿ ವ್ಯವಹಾರದ ವಿಚಾರವಾಗಿ ಚಕಮಕಿ ಉಂಟಾಗಿ, ಆಸಿಫ್ ತನ್ನ ಪರವಾನಿಗೆಯುಳ್ಳ ಗನ್‌ನಿಂದ ಶರಾಫತ್ ಅಲಿ ಮೇಲೆ ಗುಂಡು ಹಾರಿಸಿ ಕೊಲೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.
ʼಓರ್ವ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿ ಮತ್ತೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗುರುವಾರ ಮಧ್ಯಾಹ್ನ 12:30ರ ಸುಮಾರಿಗೆ ಘಟನೆ ಸಂಭವಿಸಿದೆ. ವಾಸ್ತವ ಏನೆಂಬುದು ತನಿಖೆಯ ನಂತರ ತಿಳಿಯಲಿದೆ. ಇಬ್ಬರೂ ರಿಯಲ್ ಎಸ್ಟೇಟ್ ಉದ್ಯಮಿಗಳಾಗಿದ್ದು, ಘಟನೆಗೆ ನೈಜ ಕಾರಣ ಏನು ಎಂಬುದನ್ನು ಪತ್ತೆ ಮಾಡಲಾಗುವುದುʼ
-ಮುಹಮ್ಮದ್ ಸುಜೀತಾ, ಪೊಲೀಸ್ ವರಿಷ್ಠಾಧಿಕಾರಿ