ಹಾಸನ: ಚಲಿಸುತ್ತಿದ್ದ ರೈಲಿನಿಂದ ನದಿಗೆ ಬಿದ್ದ ಯುವಕ; ಅಪಾಯದಿಂದ ಪಾರು

ಹಾಸನ, ಜನವರಿ 30: ಚಲಿಸುತ್ತಿದ್ದ ರೈಲಿನ ಬಾಗಿಲಿನಲ್ಲಿ ಅಜಾಗರೂಕತೆಯಿಂದ ನಿಂತಿದ್ದ ವಿದ್ಯಾರ್ಥಿಯೊಬ್ಬ ಆಯತಪ್ಪಿ ಹೇಮಾವತಿ ನದಿಗೆ ಬಿದ್ದರೂ ಪವಾಡ ಸದೃಶವಾಗಿ ಬದುಕುಳಿದ ಘಟನೆ ಬುಧವಾರ ರಾತ್ರಿ ಹೊಳೆನರಸೀಪುರ ಪಟ್ಟಣದಲ್ಲಿ ನಡೆದಿದೆ.
ಪ್ರಾಣಾಪಾಯದಿಂದ ಪಾರಾದ ವಿದ್ಯಾರ್ಥಿ ಮುಝಮ್ಮಿಲ್ (17), ಹಾಸನದ ಎಚ್‌ಕೆಎಸ್ ವಿದ್ಯಾಸಂಸ್ಥೆಯ ಪ್ರಥಮ ಪಿಯುಸಿ ವಿದ್ಯಾರ್ಥಿ.
ಕೆ.ಆರ್. ನಗರದಿಂದ ಹಾಸನ ಕಡೆಗೆ ಬರುತ್ತಿದ್ದ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮುಝಮ್ಮಿಲ್, ಚಲಿಸುತ್ತಿದ್ದ ಬೋಗಿಯ ಮೆಟ್ಟಿಲು ಹಿಡಿದು, ಒಂದು ಕಾಲು ಒಳಗೂ, ಮತ್ತೊಂದು ಕಾಲು ಹೊರಗೂ ಇಟ್ಟು ನಿಂತಿದ್ದನು. ರೈಲು ಹೊಳೆನರಸೀಪುರ ಪಟ್ಟಣದ ಹೇಮಾವತಿ ನದಿ ಸೇತುವೆ ಮೇಲೆ ಸಾಗುತ್ತಿದ್ದ ವೇಳೆ, ಅಜಾಗರೂಕತೆಯಿಂದ ಆಯತಪ್ಪಿ ಸುಮಾರು 70-80 ಅಡಿ ಎತ್ತರದಿಂದ ಹೇಮಾವತಿ ನದಿಗೆ ಬಿದ್ದಿದ್ದಾನೆ.
ಘಟನೆ ವೇಳೆ ಹೇಮಾವತಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಕಡಿಮೆ ಇತ್ತು. ಮುಝಮ್ಮಿಲ್ ನದಿಗೆ ಬಿದ್ದ ಕೂಡಲೇ ಹರಿಯುತ್ತಿರುವ ನೀರಿನ ಮಧ್ಯೆ ಇರುವ ಬಂಡೆ ಹಿಡಿದು, ಜೀವಭಯದ ನಡುವೆಯೂ ಕಿರುಚಾಡುತ್ತಿದ್ದುದನ್ನು ಕೇಳಿಸಿಕೊಂಡ ಸ್ಥಳೀಯರು ತಕ್ಷಣವೇ ನದಿಗೆ ಇಳಿದು, ಅವನನ್ನು ಸುರಕ್ಷಿತವಾಗಿ ರಕ್ಷಿಸಿ, ಪೊಲೀಸರಿಗೆ ಒಪ್ಪಿಸಿದರು.
ಗಂಭೀರ ಗಾಯಗಳಿಲ್ಲದಿದ್ದರೂ ಮುಝಮ್ಮಿಲ್‌ನ್ನು ಹೊಳೆನರಸೀಪುರ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಹೊಳೆನರಸೀಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.