ಸೀಡಿ ಬಿಡುಗಡೆಯೇ ಹಾಸನ ಜಿಲ್ಲೆಗೆ ಕಾಂಗ್ರೆಸ್ ಕೊಟ್ಟ ಕೊಡುಗೆ : ಎಚ್ಡಿಕೆ ವ್ಯಂಗ್ಯ
ಎಚ್.ಡಿ.ಕುಮಾರಸ್ವಾಮಿ
ಹಾಸನ : ಹಾಸನ ಜಿಲ್ಲೆಗೆ ದೇವೇಗೌಡರ ಕುಟುಂಬದ ಕೊಡುಗೆ ಏನು ಎಂದು ಕೇಳಿರುವ ಡಿಸಿಎಂ ಡಿ.ಕೆ.ಶಿವಕುಮಾರ್ಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ಹಾಗಾದರೆ ಹಾಸನಕ್ಕೆ ಕಾಂಗ್ರೆಸ್ ನಾಯಕರ ಕೊಡುಗೆ ಏನು? ಎಂದು ಕೇಳಿದ್ದಾರೆ.
ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಕಾಂಗ್ರೆಸ್ ನಾಯಕರ ಕೊಡುಗೆ ಅದೆಂತಹದ್ದು ಎನ್ನುವುದು ನನಗೆ ಗೊತ್ತಿದೆ. ಸಿಡಿ ಬಿಟ್ರಲ್ಲಾ, ಅದೇ ತಾನೇ ಹಾಸನ ಜಿಲ್ಲೆಗೆ ಕಾಂಗ್ರೆಸ್ನವರ ಕೊಡುಗೆ? ಅದು ಬಿಟ್ಟು ಹಾಸನ ಜಿಲ್ಲೆಗೆ ಅವರು ಏನು ಕೊಟ್ಟಿದ್ದಾರೆ? ಇವತ್ತು ಹಾಸನ ಜಿಲ್ಲೆ ಅಭಿವೃದ್ಧಿ ಕಂಡಿದ್ದರೆ ದೇವೇಗೌಡರು, ರೇವಣ್ಣ ಹಾಗೂ ನಾನು ಮುಖ್ಯಮಂತ್ರಿ ಇದ್ದಾಗ ಆಗಿದ್ದು. ನಾನು ನನ್ನದೇ ಆದಂತಹ ಜವಾಬ್ದಾರಿ ನಿರ್ವಹಣೆ ಮಾಡಿದ್ದೇನೆ. ಇವರೇನು ಕೊಟ್ಟಿದ್ದಾರೆ, ಹಾಸನದ ಫ್ಲೈ ಓವರ್ ರೆಡಿ ಮಾಡಲು ಆಗಲಿಲ್ಲ, ಇವರ ಯೋಗ್ಯತೆಗೆ" ಎಂದು ಕಿಡಿಕಾರಿದರು.
ನಾವೇನಾದರೂ ಸಾರ್ವಜನಿಕ ಸಂಪತ್ತನ್ನು ಲೂಟಿ ಮಾಡಿ ಸಾಕ್ಷಿಗುಡ್ಡೆಗಳನ್ನು ನಿರ್ಮಾಣ ಮಾಡಿದರೆ ತೋರಿಸಬಹುದಿತ್ತು. ಅವರು ಸಾರ್ವಜನಿಕರ ಆಸ್ತಿ, ಸರಕಾರದ ಆಸ್ತಿ, ಪ್ರಕೃತಿಯನ್ನು ಲೂಟಿ ಹೊಡೆದಿರುವುದಕ್ಕೆ ಸಾಕ್ಷಿ ಇದೆ. ನಾವು ಎಲ್ಲಿಂದ ತರೋದು ಸಾಕ್ಷಿ ಗುಡ್ಡೆನಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.