ಭೂಕುಸಿತ ತಡೆಗೆ 300 ಕೋಟಿ ರೂ.ಯೋಜನೆ : ಸಚಿವ ಕೃಷ್ಣಬೈರೇಗೌಡ
ಹಾಸನ : ರಾಜ್ಯದ ವಿವಿಧೆಡೆ ಭಾರೀ ಮಳೆಯಿಂದ ಭೂಕುಸಿತ ಹಾಗೂ ರಸ್ತೆ ಹಾಳಾಗಿದ್ದು, ರಾಜ್ಯದ ವ್ಯಾಪ್ತಿಗೆ ಬರುವ ರಸ್ತೆಗಳಲ್ಲಿ ಭೂಕುಸಿತ ತಡೆಗೆ ಹಂತ ಹಂತವಾಗಿ 300 ಕೋಟಿ ರೂ.ಯೋಜನೆ ಕೈಗೆತ್ತಿಕೊಳ್ಳಲು ಈಗಾಗಲೇ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಶಿರಾಡಿಘಾಟ್‌ನ ದೊಡ್ಡತಪ್ಪಲೆ ಬಳಿಯ ಹೆದ್ದಾರಿಯಲ್ಲಿ ಭಾರೀ ಭೂಕುಸಿತ ಆಗಿರುವ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಅವರು ಮಾತನಾಡಿದರು.
ಮಲೆನಾಡು ಭಾಗದ ಜಿಲ್ಲೆಗಳಿಗೆ ವಿಶೇಷ ಆದ್ಯತೆ ನೀಡಿ ಹೊಸ ಮಾರ್ಗಸೂಚಿ ತಯಾರಿಸಿ ಒಂದು ವಾರದ ಒಳಗೆ ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಲು ಸೂಚನೆ ನೀಡಿದ್ದೇನೆ. ಮಂಗಳವಾರ ದೊಡ್ಡತಪ್ಪಲು ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಭೂಕುಸಿತ ಉಂಟಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹೆದ್ದಾರಿಯಲ್ಲಿ ಕಳೆದ 20 ವರ್ಷಗಳಿಂದ ಅನೇಕ ಸಮಸ್ಯೆ ಎದುರಿಸುತ್ತಾ ಬಂದಿದ್ದೇವೆ. ದೊಡ್ಡ ಸವಾಲುಗಳ ನಡುವೆಯೂ ಹೆದ್ದಾರಿ ಪ್ರಾಧಿಕಾರ ರಸ್ತೆ ಅಗಲೀಕರಣಕ್ಕೆ ಮುಂದಾಗಿದೆ. ಆದರೆ ಭೂಕುಸಿತಕ್ಕೆ ಬಹಳ ಕಡಿದಾಗಿ ರಸ್ತೆ ಬದಿಯ ಗುಡ್ಡಗಳಿಂದ ಮಣ್ಣು ತೆಗೆದಿರುವುದು ಕುಸಿತಕ್ಕೆ ಕಾರಣವಾಗಿದೆ ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ಸಿಮೆಂಟ್ ಮಂಜು, ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಜಿಪಂ ಸಿಇಒ ಪೂರ್ಣಿಮಾ, ಕಾಂಗ್ರೆಸ್ ಮುಖಂಡ ಮುರಳಿ ಮೋಹನ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಜರಿದ್ದರು.
ಮುಂದುವರಿದ ರೈಲು ಮಾರ್ಗ ದುರಸ್ತಿ ಕಾರ್ಯ:ಸಕಲೇಶಪುರ ತಾಲೂಕಿನ ಯಡಕುಮರಿ ಬಳಿ ಭೂಕುಸಿತಗೊಂಡು ಹಾಸನ-ಮಂಗಳೂರು ನಡುವಿನ ರೈಲು ಸಂಚಾರ ಕಡಿತವಾಗಿ 3 ದಿನಗಳು ಕಳೆದಿವೆ. ಸಂಪರ್ಕ ಮರುಸ್ಥಾಪನೆಗಾಗಿ 700ಕ್ಕೂ ಹೆಚ್ಚು ಕಾರ್ಮಿಕರು ಸುರಿಯುವ ಮಳೆ, ಮೈಕೊರೆಯುವ ಚಳಿ, ಕಾಲು ಹೂತು ಹೋಗುವ ಕೆಸರನ್ನೂ ಲೆಕ್ಕಿಸದೆ ಹಗಲಿರುಳು ಶ್ರಮಿಸುತ್ತಿದ್ದಾರೆ.