ಹಾಸನ : ದೇವಸ್ಥಾನಕ್ಕೆ ಪ್ರವೇಶ ನೀಡುವಂತೆ ಆಗ್ರಹಿಸಿ ಮಡೇನೂರು ಗ್ರಾಮಸ್ಥರಿಂದ ಎಸ್ಪಿ ಕಚೇರಿಗೆ ಮನವಿ
ಹಾಸನ : ನಮ್ಮಿಂದಲೇ ಹಣ ಪಡೆದು ದೇವಸ್ಥಾನದ ಜೀರ್ಣೋದ್ಧಾರ ಮಾಡಿ, ಈಗ ದೇವಸ್ಥಾನಕ್ಕೆ ಗ್ರಾಮಸ್ಥರನ್ನು ನಿಷೇಧ ಮಾಡಿದ್ದಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಎಲ್ಲರಂತೆ ನಮಗೂ ಕೂಡ ದೇವಾಲಯದ ಒಳ ಪ್ರವೇಶ ಮಾಡಲು ಅವಕಾಶ ಮಾಡಿಕೊಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿಗೆ ತಾಲೂಕಿನ ಶಾಂತಿಗ್ರಾಮ ಹೋಬಳಿಯ ಮಡೇನೂರು ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ.
ಈ ಸಂಬಂಧ ಆರ್.ಪಿ.ಐ. ಸತೀಶ್ ಸುದ್ದಿಗಾರರೊಂದಿಗೆ ಮಾತನಾಡಿ, ʼಮಡೇನೂರಿನಲ್ಲಿರುವ ಸತಿಗನಹಳ್ಳಿ ಅಮ್ಮನವರ ದೇವಸ್ಥಾನವನ್ನು ನೂತನವಾಗಿ ನಿರ್ಮಾಣ ಮಾಡಲಾಗಿದೆ . ಮಾರ್ಚ್ 1 ರಂದು ದೇವಸ್ಥಾನದ ಜೀರ್ಣೋದ್ಧಾರದ ಕಾರ್ಯಕ್ರಮ ನಡೆಯಲಿದೆ. ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಲು ನಮ್ಮಂದ ಮನೆಗೆ 5 ಸಾವಿರ ರೂ.ಗಳಂತೆ ಹಣ ಪಡೆಯಲಾಗಿದ್ದು, ದೇವಸ್ಥಾನ ಕಟ್ಟುವ ವೇಳೆ ಎಲ್ಲಾ ಕೆಲಸ ಕಾರ್ಯಗಳನ್ನು ನಾವು ಮಾಡಿದ್ದೇವೆʼ ಎಂದರು.
2024 ಫೆಬ್ರವರಿ 29 ರಿಂದ ಮಾರ್ಚ್ 2ರ ವರೆಗೂ ದೇವಸ್ಥಾನದ ವಿವಿಧ ಕಾರ್ಯಕ್ರಮಗಳು ಜರುಗಲಿದೆ. ದೇವಿಯ ಪುನರ್ ಸ್ಥಾಪನೆ ಮಾಡುವ ಮೊದಲು ರಾಮನಾಥಪುರಕ್ಕೆ ಕೊಂಡೂಯ್ಯಲು ಬಸ್ಸಿನಲ್ಲಿ ಹೊರಟಿದ್ದಾಗ ಕೆಲವರು ತಡೆದು, ಇಲ್ಲಿ ದೇವರ ಕಳಸ ಇದ್ದು, ನೀವು ಬಂದರೆ ಮೈಲಿಗೆ ಆಗುತ್ತದೆ. ಕೆಳಗೆ ಇಳಿಯುವಂತೆ ಅವಾಚ್ಯ ಪದಗಳಿಂದ ನಿಂದಿಸಲಾಯಿತು ಎಂದು ಅವರು ದೂರಿದ್ದಾರೆ.
ಈ ಬಗ್ಗೆ ಪರಿಶೀಲಿಸಿ ನಮಗೂ ದೇವಸ್ಥಾನಕ್ಕೆ ಪ್ರವೇಶ ಮಾಡಲು ಅವಕಾಶ ಕೊಡಬೇಕು. ಹಾಗೂ ಗ್ರಾಮಸ್ಥರ ಮೇಲೆ ಕ್ರಮ ತೆಗೆದುಕೊಂಡು ನಮಗೆ ರಕ್ಷಣೆ ಒದಗಿಸುವಂತೆ ಕೋರಿದರು.
ಗ್ರಾಮಸ್ಥರಾದ ಮಡೇನೂರು ಗ್ರಾಮ ಪಂಚಾಯಿತಿ ಸದಸ್ಯೆ ಕೋಮಲಾ, ಗ್ರಾಮದ ಪುಟ್ಟಮ್ಮ, ಪ್ರಸನ್ನ, ಚಿನ್ನು ಇತರರು ಉಪಸ್ಥಿತರಿದ್ದರು.