ಪೆನ್ಡ್ರೈವ್ ಪ್ರಕರಣ | ಪ್ರಜ್ವಲ್, ಎಚ್.ಡಿ. ರೇವಣ್ಣ ಬಂಧನಕ್ಕೆ ಆಗ್ರಹಿಸಿ ಹಾಸನದಲ್ಲಿ ಪ್ರತಿಭಟನೆ ; ಡಿಸಿಗೆ ಮನವಿ
ಹಾಸನ : ಆಶ್ಲೀಲ ವಿಡಿಯೋಗಳ ಪೆನ್ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿ ಪ್ರಜ್ವಲ್ ಮತ್ತು ಎಚ್.ಡಿ. ರೇವಣ್ಣ ಅವರನ್ನು ಕೂಡಲೇ ಬಂಧಿಸಿ ಸೂಕ್ತ ತನಿಖೆ ನಡೆಸಿ, ಶಿಕ್ಷೆಗೊಳಪಡಿಸಿ ಮಹಿಳೆಯರನ್ನು ರಕ್ಷಿಸಲು ಆಗ್ರಹಿಸಿ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರಿಗೆ ಮನವಿ ಸಲ್ಲಿಸಲಾಯಿತು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾಗಾರರು ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದರು. ಸಿಐಟಿಯು ಜಿಲ್ಲಾಧ್ಯಕ್ಷರಾದ ಧರ್ಮೇಶ್ ಮತ್ತು ಕೆ.ಎಸ್. ವಿಮಲಾ ಮಾತನಾಡಿ, ಕೆಲ ದಿನಗಳಿಂದ ಹಾಸನದಲ್ಲಿ ಪೆನ್ ಡ್ರೈವ್ ಮುಖಾಂತರ ಅಶ್ಲೀಲ ಚಿತ್ರಗಳು ಮತ್ತು ದೃಶ್ಯಗಳನ್ನು ಹಂಚಲಾಗುತ್ತಿದೆ. ಆ ಚಿತ್ರಗಳು ಮತ್ತು ದೃಶ್ಯಗಳು ವಾಟ್ಸ್ಆಪ್ಗಳಲ್ಲಿ ಹರಿದಾಡುತ್ತಿವೆ. ಈ ವಿಚಾರ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೊಳಗಾಗುತ್ತಿದ್ದು, ಎಲ್ಲೆಡೆ ಈ ಕೃತ್ಯದ ಕುರಿತು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರತಿದಿನ ಹೊಸ ಹೊಸ ಚಿತ್ರಗಳು ಮತ್ತು ದೃಶ್ಯಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಈ ಚಿತ್ರಗಳು ಮತ್ತು ದೃಶ್ಯಗಳಲ್ಲಿರುವ ಮಹಿಳೆಯರ ಖಾಸಗಿ ಮತ್ತು ಕೌಟುಂಬಿಕ ಬದುಕು ಛಿದ್ರವಾಗಿದೆ. ಕೆಲವರು ಆತ್ಮಹತ್ಯೆಗೂ ಪ್ರಯತ್ನಿಸಿರುವ ವರದಿಗಳಿವೆ. ಈ ಪ್ರಕರಣದ ಪ್ರಮುಖ ಆರೋಪಿ ಎಂದು ಹೇಳಲಾಗುತ್ತಿರುವ ಪ್ರಜ್ವಲ್ ರೇವಣ್ಣ ವಿರುದ್ಧ ಹೊಳೆನರಸೀಪುರದಲ್ಲಿ ಪ್ರಕರಣ ದಾಖಲಾಗಿದ್ದು, ಅದರಲ್ಲಿ ಮೊದಲ ಆರೋಪಿಯಾಗಿರುವ ಎಚ್.ಡಿ.ರೇವಣ್ಣ ಇವರನ್ನು ಕೂಡಲೇ ಬಂಧಿಸಿ ವಿಚಾರಣೆ ನಡೆಸಬೇಕು ಎಂದರು
ಈಗಾಗಲೇ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಹೊಳೆನರಸಿಪುರದ ಬಿಜೆಪಿ ಮುಖಂಡ ಜಿ. ದೇವರಾಜೇಗೌಡ ಎಂಬುವವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಬಳಿ 2 ಸಾವಿರಕ್ಕೂ ಹೆಚ್ಚು ಪೋಟೋ, ವೀಡಿಯೋಗಳಿವೆ ಆ ಕುರಿತು ಬಿಜೆಪಿ ಹೈಕಮಾಂಡ್ಗೆ ಮಾಹಿತಿ ನೀಡಿರುವುದಾಗಿ ತಿಳಿಸಿದ್ದಾರೆ. ಪೋಲೀಸರು ಕೂಡಲೇ ಅವರನ್ನು ವಿಚಾರಣೆಗೆ ಒಳಪಡಿಸಿದಲ್ಲಿ ಆ ವೀಡಿಯೋಗಳನ್ನು ಚಿತ್ರೀಕರಿಸಿರುವ ವ್ಯಕ್ತಿ ಯಾರು?. ದೇವರಾಜೇಗೌಡರಿಗೆ ಆ ವೀಡಿಯೋಗಳನ್ನು ನೀಡಿರುವ ವ್ಯಕ್ತಿ ಯಾರು?. ಎನ್ನುವುದು ಗೊತ್ತಾಗುತ್ತದೆ. ಮತ್ತು ಆ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿದರೆ ಆ ವ್ಯಕ್ತಿ ಯಾರ್ಯಾರಿಗೆ ಈ ವೀಡಿಯೋಗಳನ್ನು ನೀಡಿದ್ದಾನೆ. ಹಾಗೂ ಯಾರು ಈ ವೀಡಿಯೋಗಳನ್ನು ಪೆನ್ಡೈವ್ ಮುಖಾಂತರ ಸಾರ್ವಜನಿಕರಿಗೆ ಹಂಚುತ್ತಿದ್ದಾರೆ ಎನ್ನುವ ಸತ್ಯಾಂಶ ಹೊರಬರಲಿದೆ ಎಂದು ಹೇಳಿದರು. ಕೂಡಲೇ ಬಿಜೆಪಿ ಮುಖಂಡ ಜಿ. ದೇವರಾಜೇಗೌಡರನ್ನು ವಿಚಾರಣೆಗೆ ಒಳಪಡಿಸಿ ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟದ ದೇವಿ, ಗೌರಮ್ಮ, ಜೆಎಂಎಸ್, ಶೋಭಾ ರಾಜ್ಯ ಕಾರ್ಯದರ್ಶಿ ಎಐಎಂ ಎಸ್.ಎಸ್, ಇತರರು ಉಪಸ್ಥಿತರಿದ್ದರು,