ಹಾಸನ | ಎಚ್.ಡಿ. ರೇವಣ್ಣ, ಪ್ರಜ್ವಲ್ ಮೇಲಿನ ಆರೋಪ ಸುಳ್ಳು : ಸಂತ್ರಸ್ತೆಯ ವಿರುದ್ಧ ತಿರುಗಿಬಿದ್ದ ಕುಟುಂಬ
ಹಾಸನ : ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಪ್ರಜ್ವಲ್ ಹಾಗೂ ಎಚ್.ಡಿ. ರೇವಣ್ಣ ಅವರ ಮೇಲೆ ಮಾಡುತ್ತಿರುವ ಆರೋಪ ಸುಳ್ಳಾಗಿದ್ದು, ನಾವು ಎಲ್ಲಿ ಬೇಕಾದರೂ ಆಣೆ ಮಾಡಲು ಸಿದ್ದ ಎಂದು ಸಂತ್ರಸ್ತೆಯ ಸಂಬಂಧಿಕರಾದ ಗೌರಮ್ಮ ಹಾಗೂ ಸಂಬಂಧಿಕರು ಹೇಳಿಕೆ ನೀಡಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, "ಪ್ರಜ್ವಲ್ ರೇವಣ್ಣ ವಿರುದ್ಧ ಪ್ರಕರಣ ದಾಖಲು ಮಾಡಿರುವ ಸಂತ್ರಸ್ತೆ ಈ ಹಿಂದೆ ಸಾಲ ಮಾಡಿಕೊಂಡಿದ್ದ ವೇಳೆ ಸಾಲ ಕೊಟ್ಟವರು ಸಂತ್ರಸ್ತೆ ಜೊತೆಗೆ ಗಲಾಟೆ ಮಾಡುತ್ತಿದ್ದರು. ಅದಾದ ಬಳಿಕ ಜೆಡಿಎಸ್ ನಾಯಕಿ ಭವಾನಿ ರೇವಣ್ಣ ಅವರ ಮನೆಯಲ್ಲಿ ನಾಲ್ಕು ವರ್ಷಗಳು ಮನೆ ಕೆಲಸ ಮಾಡಿದ್ದಾರೆ. ನಾಲ್ಕು ವರ್ಷ ಭವಾನಿ ರೇವಣ್ಣ ಅವರ ಮನೆಯಲ್ಲಿ ಕೆಲಸ ಮಾಡಿದ ವೇಳೆ ಅವರನ್ನು ಭವಾನಿ ರೇವಣ್ಣ, ಎಚ್.ಡಿ. ರೇವಣ್ಣ, ಹಾಗೂ ಪ್ರಜ್ವಲ್ ರೇವಣ್ಣ ಚೆನ್ನಾಗಿ ನೋಡಿಕೊಂಡಿದ್ದಾರೆ. ಆದರೆ ಅವರು ಇದ್ದಕ್ಕಿದ್ದಂತೆ ಅವರ ಮನೆಯಲ್ಲಿ ಕೆಲಸ ಬಿಟ್ಟು ಹೋರ ಹೋಗಿದ್ದಾರೆ. ಬಳಿಕ ಘಟನೆ ನಡೆದು ಇಷ್ಟು ದಿನ ಕಳೆದರೂ ದೂರು ನೀಡದ ಮಹಿಳೆ ಚುನಾವಣೆ ವೇಳೆ ಯಾರದ್ದೊ ಮಾತು ಕೇಳಿಕೊಂಡು ದೇವೇಗೌಡರ ಕುಟುಂಬದ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.
ಐದು ವರ್ಷದ ಹಿಂದೆಯೇ ಆರೋಪ ಮಾಡಬಹುದಿತ್ತು. ಆದರೇ ಚುನಾವಣೆ ಸಂದರ್ಭದಲ್ಲಿ ಮಾಡಿರುವುದು ಸುಳ್ಳು ಆರೋಪ ಎಂದ ಅವರು, ಬೇಕಾದರೇ ಮಂಜುನಾಥ ಸ್ವಾಮಿ ಆಣೆ ಮಾಡಲು ನಾವು ಸಿದ್ಧ ಎಂದು ಹೇಳಿದರು. ಪ್ರಸ್ತುತದಲ್ಲಿ ವಿಡಿಯೋವನ್ನು ಮಿಕ್ಸಿಂಗ್ ಮಾಡಿ ಈ ರೀತಿ ಬಿಂಬಿಸಲಾಗಿದೆ. ಇದು ಸತ್ಯವಲ್ಲ. ಹತ್ತಿರದಿಂದ ನೋಡಿರುವ ನಾವು ಅವರ ಬಗ್ಗೆ ತಿಳಿದುಕೊಂಡಿರುವುದಾಗಿ ಇದೆ ವೇಳೆ ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಚ್.ಡಿ. ರೇವಣ್ಣರ ಸಂಬಂಧಿಕರಾದ ವಾರ್ಗೀತಿ ಜಯಂತಿ, ಶಿಲ್ಪ, ವೇಧ, ಜ್ಯೋತಿ, ಮಂಜುನಾಥ್ ಇತರರು ಉಪಸ್ಥಿತರಿದ್ದರು.