'ಹಾಸನ ಚಲೋ' ಪ್ರತಿಭಟನೆಗೆ ಮುಸ್ಲಿಂ ಮಹಿಳೆಯರ ಬೆಂಬಲ
ಸಕಲೇಶಪುರ : ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ವಿರೋಧಿಸಿ ಮೇ.30 ರಂದು ಹಾಸನದಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಗೆ ಮುಸ್ಲಿಂ ಮಹಿಳೆಯರಾದ ನಾವುಗಳು ಬೆಂಬಲ ವ್ಯಕ್ತಪಡಿಸುತ್ತೇವೆ ಎಂದು ಮಹಿಳಾ ಮುಖಂಡರಾದ ಸಾಯೀರಾ ಭಾನು, ಹಸೀನಾ ಹುರುಡಿ ಮತ್ತು ಅವ್ವಮ್ಮ ಹೇಳಿದರು.
ಬುಧವಾರ ಪತ್ರಿಕಾ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಸಂಸದರಾಗಿ ಹೆಣ್ಣು ಮಕ್ಕಳನ್ನು ದುರ್ಬಳಕೆ ಮಾಡಿಕೊಂಡಿರುವುದು ಹಾಗೂ ಲೈಂಗಿಕ ವಿಕೃತಿ ಮೆರೆದಿರುವುದು ಖಂಡನೀಯ. ಈ ಘಟನೆಯಿಂದ ಹಾಸನ ಜಿಲ್ಲೆ ಅಪಕೀರ್ತಿಗೆ ಒಳಗಾಗಿದೆ. ಜಿಲ್ಲೆಯ ಜನ ಅವಮಾನಕ್ಕೆ ಒಳಗಾಗಿದ್ದಾರೆ. ಈ ಘಟನೆಯಿಂದ ಮಹಿಳೆಯರು ರಾಜಕಾರಣದಲ್ಲಿ ತೊಡಗಿಸಿಕೊಳ್ಳುವುದು ಕಷ್ಟಕರವಾಗಿದೆ. ಸಮಾಜ ಯಾವ ದೃಷ್ಟಿಯಿಂದ ನಮ್ಮನ್ನು ಮೌಲ್ಯಮಾಪನ ಮಾಡುತ್ತದೆ ಎಂದು ಅಂತರ್ಮುಖಿಯಾಗಿ ಚಿಂತಿಸುವಂತೆ ಮಾಡಿದೆ ಎಂದು ಹೇಳಿದ್ದಾರೆ
ಮುಸ್ಲಿಂ ಮಹಿಳೆಯರು ರಾಜಕಾರಣದ ಮುಖ್ಯವಾಹಿನಿಯಲ್ಲಿ ಬಂದು ಕೆಲಸ ಮಾಡುವುದು ಸುಲಭವಲ್ಲ. ಪತಿ, ತಂದೆ ತಾಯಿ, ಸಹೋದರ-ಸಹೋದರಿ, ಬಂದು- ಮಿತ್ರರ ಸಹಕಾರ ಅತ್ಯಗತ್ಯ ಇವರ ವಿಶ್ವಾಸ ಗಳಿಸಿಕೊಂಡು, ಸಂಪ್ರದಾಯ ಮೈಗೂಡಿಸಿಕೊಂಡು ಸಾಮಾಜಿಕ ಕ್ಷೇತ್ರಕ್ಕೆ ತೊಡಗಿಸಿ ಕೊಳ್ಳಬೇಕು. ನಮ್ಮನ್ನು ಪುರುಷ ಪ್ರಧಾನ ರಾಜಕೀಯ ಕ್ಷೇತ್ರ ಉತ್ತಮವಾಗಿ ಬಳಸಿಕೊಳ್ಳಬೇಕು, ಗೌರವ ನೀಡಬೇಕು. ಆದರೆ ಮಹಿಳೆಯರ ಮಾನ, ಮರ್ಯಾದೆ ಬೀದಿಯಲ್ಲಿ ಹರಾಜು ಮಾಡುವಂತಹ ಪ್ರಸಂಗಗಳು ನಡೆದರೆ ಯಾರು ತಾನೆ ನಮ್ಮನ್ನು ಬೆಂಬಲಿಸುತ್ತಾರೆ. ಮಹಿಳೆಯರಿಂದ ಕುಟುಂಬಗಳು ಸಮಾಜದಲ್ಲಿ ತಲೆ ತಗ್ಗಿಸುವ ಪ್ರಸಂಗಗಳು ಎದುರಾದರೆ ಇಂತಹ ಗಂಡಾಂತರ ನಡೆದಾಗ ಕುಟುಂಬ ಇಷ್ಟ ಪಡುವುದಿಲ್ಲ ಎಂದಿದ್ದಾರೆ.
ಈ ಹಿನ್ನೆಲೆಯಲ್ಲಿ ನಾವು ಮೇ.30 ರ ಪ್ರತಿಭಟನೆಗೆ ಸಂಪೂರ್ಣ ಸಹಕಾರ ಬೆಂಬಲ ನೀಡುತ್ತಿದ್ದೇವೆ. ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಈ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಮನವಿ ಮಾಡುತ್ತೇವೆ ಎಂದರು.