ದೇಶದ ಸೌಹಾರ್ದ ಪರಂಪರೆಯನ್ನು ಮುಂದಿನ ಪೀಳಿಗೆಗೂ ಉಳಿಸಿ : ಯು.ಟಿ.ಖಾದರ್
ಸಕಲೇಶಪುರ : ಮನುಷ್ಯ ಹುಟ್ಟುವಾಗ ಮತ್ತು ಸಾಯುವಾಗ ನಿಸ್ವಾರ್ಥವಾಗಿ ವರ್ತಿಸುತ್ತಾನೆ ಆದರೆ ಮಧ್ಯದ ಜೀವನವನ್ನು ನೈತಿಕತೆಯಿಂದ ನಡೆಸಿದರೆ ಸಮಾಜದಲ್ಲಿ ಸುಖವಾಗಿ ಬಾಳಬಹುದು ಎಂದು ವಿಧಾನಸಭಾ ಸಭಾಪತಿ ಯು.ಟಿ.ಖಾದರ್ ಹೇಳಿದ್ದಾರೆ.
ಪಟ್ಟಣದ ಕುಡುಗರಲ್ಲಿ ಬಡಾವಣೆಯಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮುಂದಿನ ಪೀಳಿಗೆಗೆ ಸೌಹಾರ್ದಯುತ ಸಮಾಜ ನೀಡುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಈ ನಿಟ್ಟಿನಲ್ಲಿ ಸಮಾಜದಲ್ಲಿ ವಿಶ್ವಾಸವನ್ನು ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕಾಗಿದೆ ಎಂದು ಹೇಳಿದರು.
ಜೀವನ ಎಂಬ ಒಂದು ಸಣ್ಣ ಪಯಣದಲ್ಲಿ ಸಣ್ಣಪುಟ್ಟ ವಿಷಯಗಳನ್ನು ಹಿಡಿದುಕೊಂಡು ಸಮಸ್ಯೆಗಳನ್ನು ಸೃಷ್ಟಿ ಮಾಡಿಕೊಳ್ಳಬಾರದು. ಶಾಂತಿ ನೆಮ್ಮದಿ ಸಹಬಾಳ್ವೆಯಿಂದ ಬದುಕನ್ನು ಮುಂದುವರಿಸಬೇಕು ಎಂದು ಅವರು ಕರೆ ನೀಡಿದರು.
ಸಮಾಜದ ಉನ್ನತಿಗಾಗಿ ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಜವಾಬ್ದಾರಿಯಿಂದ ನೆರವೇರಿಸಬೇಕು. ಧಾರ್ಮಿಕ ಕೇಂದ್ರಗಳ ಸ್ಥಾಪನೆಯಿಂದ ಆ ನಿರ್ದಿಷ್ಟ ಸಮುದಾಯಕ್ಕಷ್ಟೇ ಲಾಭ. ಆದರೆ ಶಾಲೆ ಮತ್ತು ಆಸ್ಪತ್ರೆಗಳ ಮೂಲಕ ಎಲ್ಲರೂ ಲಾಭ ಪಡೆಯುತ್ತಾರೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಸಮಾನ ಮನೋಭಾವವನ್ನು ಬೆಳೆಸಬೇಕು, ಎಂದು ಸಲಹೆ ನೀಡಿದರು.
ವಿಚಾರವಾದಿ ನಿಕಿತ್ ರಾಜ್ ಮೌರ್ಯ ಅವರು ಮಾತನಾಡಿ, ಸೌಹಾರ್ದ ಇದ್ದರೆ ಮಾತ್ರ ಭಾರತ ಬಲಿಷ್ಠವಾಗಿ ಇರುತ್ತದೆ. ಸೌಹಾರ್ದತೆಗೆ ಧಕ್ಕೆ ಬಂದರೆ, ದೇಶವೇ ದುರ್ಬಲವಾಗುತ್ತದೆ, ಎಂದು ಹೇಳಿದರು. ಶಾಂತಿ ಮತ್ತು ಸಹಾನುಭೂತಿಯಿಂದ ದೇಶವನ್ನು ವಿಶ್ವಗುರು ಸ್ಥಾನಕ್ಕೆ ಕೊಂಡೊಯ್ಯಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದರು.
ಶ್ರೀ ಶಂಭುನಾಥ ಸ್ವಾಮೀಜಿ ಮಾತನಾಡಿ, ಯಾವ ಮನೆಗಳಲ್ಲಿ ಮಹಿಳೆಯರು ಗೌರವದಿಂದ ಇರುತ್ತಾರೋ, ಹಿರಿಯರು ಸಂತೋಷದಿಂದಿರುತ್ತಾರೋ, ಅವುಗಳಿಂದಲೇ ಸಮಾಜಕ್ಕೆ ಶ್ರೇಷ್ಠತೆ ತರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸಮಾವೇಶದಲ್ಲಿ ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್, ಕಾಂಗ್ರೆಸ್ ಮುಖಂಡ ಎಡೆಹಳ್ಳಿ ಆರ್. ಮಂಜುನಾಥ್, ಹಿರಿಯ ಪತ್ರಕರ್ತ ಮದನ್ ಗೌಡ, ಝನುದ್ದೀನ್ ಸಖಾಫಿ, ಡಾ.ಬಶೀರ್, ವೆಂಕಟೇಶ್, ಸೈಯದ್ ಮುಫೀಝ್, ಯಾದ್ಗಾರ್ ಇಬ್ರಾಹಿಂ, ಬೈರಮುಡಿ ರಾಮಚಂದ್ರು, ಯಾದ್ಗಾರ್ ಝಾಕೀರ್, ಸಮದ್, ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪತ್ರಕರ್ತ ಮಲ್ನಾಡ್ ಮೆಹಬೂಬ್, ಸಮಾಜ ಸೇವಕ ನಯೀಮ್ ಮತ್ತಿತರರನ್ನು ಸನ್ಮಾನಿಸಲಾಯಿತು.