ಲೈಂಗಿಕ ದೌರ್ಜನ್ಯ ಆರೋಪ | ಸೂರಜ್ ರೇವಣ್ಣ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲು
ಸೂರಜ್ ರೇವಣ್ಣ
ಹಾಸನ : ಯುವಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಸಿಐಡಿ ವಶದಲ್ಲಿರುವ ವಿಧಾನಪರಿಷತ್ ಸದಸ್ಯ, ಜೆಡಿಎಸ್ ಮುಖಂಡ ಸೂರಜ್ ರೇವಣ್ಣ ವಿರುದ್ಧ ಇದೀಗ ಮತ್ತೊಂದು ಎಫ್ಐಆರ್ ದಾಖಲಾಗಿರುವುದಾಗಿ ವರದಿಯಾಗಿದೆ.
ಕೊರೋನ ಸಂದರ್ಭದಲ್ಲಿ ಸೂರಜ್ ರೇವಣ್ಣ ತನ್ನ ವಿರುದ್ಧ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ಅವರ ಆಪ್ತ ಶಿವಕುಮಾರ್ ಹೊಳೆನರಸೀಪುರ ಠಾಣೆಯಲ್ಲಿ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.
ಆದರೆ ಶಿವಕುಮಾರ್ ಈ ಹಿಂದೆ ಸೂರಜ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದ ಸಂತ್ರಸ್ತನ ವಿರುದ್ಧವೇ ಬ್ಲ್ಯಾಕ್ಮೇಲ್ ಪ್ರಕರಣ ದಾಖಲಿಸಿದ್ದು, ಬಳಿಕ ನಾಪತ್ತೆಯಾಗಿದ್ದರು. ಮಂಗಳವಾರ ಶಿವಕುಮಾರ್ ಹೊಳೆನರಸೀಪುರ ಠಾಣೆಗೆ ಹಾಜರಾಗಿ ಸೂರಜ್ ರೇವಣ್ಣ ವಿರುದ್ಧವೇ ಲೈಂಗಿಕ ದೌರ್ಜನ್ಯದ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಮೊದಲ ಸಂತ್ರಸ್ತ ಸೂರಜ್ ರೇವಣ್ಣ ಅವರನ್ನು ಬ್ಲ್ಯಾಕ್ಮೇಲ್ ಮಾಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ಸೂರಜ್ ರೇವಣ್ಣರ ಒತ್ತಡದ ಹಿನ್ನೆಲೆಯಲ್ಲಿ ಮೊದಲ ಸಂತ್ರಸ್ತನ ವಿರುದ್ಧ ಬ್ಲ್ಯಾಕ್ ಮೇಲ್ ದೂರು ದಾಖಲಿಸಿದ್ದೆ. ಸೂರಜ್ ನನಗೆ ಪ್ರಾಣ ಬೆದರಿಕೆ ಒಡ್ಡಿದ ಹಿನ್ನೆಲೆಯಲ್ಲಿ 5 ಕೋಟಿ ರೂ.ಗಾಗಿ ಬ್ಲ್ಯಾಕ್ಮೇಲ್ ಮಾಡಿರುವುದಾಗಿ ಈ ಹಿಂದೆ ದೂರು ನೀಡಿದ್ದೇನೆ ಎಂದು ಶಿವಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ಸೂರಜ್ ರೇವಣ್ಣ ಸಹಿತ ಆತನ ಸಹಚರರಾದ ಸಚಿನ್, ರಕ್ಷಿತ್ ವಿರುದ್ಧ ಹೊಳೆನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.