ಹೆತ್ತೂರು ನಾಗರಾಜ್ ಗೆ ಡಾ. ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿ
ಹೆತ್ತೂರು ನಾಗರಾಜ್
ಹಾಸನ: ಡಾ.ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿಗೆ ಭೀಮ ವಿಜಯ ಕನ್ನಡ ದಿನ ಪತ್ರಿಕೆಯ ಸಂಪಾದಕ ಹೆತ್ತೂರು ನಾಗರಾಜ್ ಬಾಜನರಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ದಲಿತ ಸಾಹಿತ್ಯದಲ್ಲಿ ಗಣನೀಯ ಸಾಧನೆ ಮಾಡಿದ ಸಾಹಿತ್ಯ ಸಾಧಕರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.
ಸಕಲೇಶಪುರ ತಾಲೂಕಿನ ಹೆದ್ದೂರು ಗ್ರಾಮದ ಹೆತ್ತೂರ್ ನಾಗರಾಜ್ ಭೀಮ ವಿಜಯ ಕನ್ನಡ ದಿನ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ತಾಲೂಕಿನ ಕಿತ್ತೂರಿನ ಹೆಚ್.ಡಿ. ಸುಬ್ಬಯ್ಯ ಮತ್ತು ಹೆಚ್.ಕೆ. ಸುಶೀಲ ದಂಪತಿಗಳ ಪುತ್ರ. ತಮ್ಮ ಬಿಎ ಪದವಿಯನ್ನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಹಾಗೂ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿನ ಎಂಎ ಪದವಿಯನ್ನು ಮೈಸೂರು ವಿವಿಯ ಮಾನಸ ಗಂಗೋತ್ರಿಯಲ್ಲಿ ಮುಗಿಸಿದರು. ವಿದ್ಯಾಭ್ಯಾಸದ ನಂತರ ವೃತ್ತಿ ಜೀವನವನ್ನು ಉದಯವಾಣಿ ಪತ್ರಿಕೆಯಲ್ಲಿ 2 ತಿಂಗಳ ತರಬೇತಿ ಪಡೆಯುವ ಮೂಲಕ ಪ್ರೊಬೆಷನರಿ ಮುಗಿಸಿದ್ದರು.
ನಂತರ ಸೂರ್ಯೋದಯ ಪತ್ರಿಕೆಯ ದಾವಣಗೆರೆ ಜಿಲ್ಲೆ ವರದಿಗಾರನಾಗಿ 2 ವರ್ಷ, ವಿಜಯ ಕರ್ನಾಟಕ ದಿನಪತ್ರಿಕೆಯ ವರದಿಗಾರರಾಗಿ ದಾವಣಗೆರೆಯಲ್ಲಿ 1 ವರ್ಷ ಹಾಗೂ ಹಾಸನ ಜಿಲ್ಲೆಯಲ್ಲಿ ವರದಿಗಾರನಾಗಿ 3 ವರ್ಷ ಕೆಲಸ ಮಾಡಿದ ಅನುಭವ ಪಡೆದರು. ನಂತರ ಜನಹಿತ ಕನ್ನಡ ದಿನಪತ್ರಿಕೆ ಹುಟ್ಟು ಹಾಕಿದ್ದು, ಹಾಸನ ಪ್ರಿಯ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರಾಗಿ ಕಳೆದ 1 ವರ್ಷದಿಂದ ಪತ್ರಿಕೆ ನಡೆಸಿದ್ದಾರೆ.
ಪ್ರಸ್ತುತ ಪೌರಕಾರ್ಮಿಕರ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸುತ್ತಿದ್ದು ಅವರ ಬದುಕು ಬವಣೆ ಕುರಿತಂತೆ `ಜಾಡಮಾಲಿ ಜಗತ್ತು’ ಅನುಭವ ಕಥನ, ಪುಸ್ತಕವಾಗಿ ಪ್ರಕಟವಾಗಿದೆ.
`ಬೆವರ ದನಿಗಳು’ ಹಾಗೂ ಜಲದ ಮಂಟಪ ಕವನ ಸಂಕಲನ ಬಿಡುಗಡೆಯಾಗಿವೆ.
`ಪೌರ ಕಾರ್ಮಿಕರ ಆರ್ಥಿಕ ನೆಲೆಗಟ್ಟುಗಳು’ ಹೆಸರಿನ ಸಂಶೋಧನಾ ಪ್ರಬಂಧವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ಮಂಡಿಸಿ ಕೃತಿ ಬಿಡುಗಡೆಯಾಗಿದೆ.
ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ದೆಹಲಿಯಲ್ಲಿ ನಡೆದ ಯೂಥ್ ಫೆಸ್ಟ್ ( ಯುವ ಬರಹಗಾರರ ಹಬ್ಬ) ದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ.
ಪೌರ ಕಾರ್ಮಿಕರ ಕುರಿತ ``ಜಾಡಮಾಲಿ ಜಗತ್ತು’’ ಕೃತಿ ನಾಟಕವಾಗಿ 50 ಕ್ಕೂ ಹೆಚ್ಚು ಪ್ರದರ್ಶನ, ಬೆಂಗಳೂರಿನ ವಿಕಾಸ ಸೌಧದಲ್ಲಿ ವಿಶೇಷ ಪ್ರದರ್ಶನ ಕಂಡಿದೆ.
ಕೆಂಡಸಂಪಿಗೆ, ಅವಧಿ ಸೇರಿದಂತೆ ಬ್ಲಾಗ್ ಬರವಣ ಗೆ. ಸ್ಥಳೀಯ ಪತ್ರಿಕೆಗಳಿಗೆ ಅಂಕಣ ಬರಹ. ಮೈಸೂರು ದಸರಾ ಕವಿಗೋಷ್ಠಿ, ಸೇರಿದಂತೆ ಐವತ್ತಕ್ಕೂ ಹೆಚ್ಚು ಕವಿಗೋಷ್ಠಿಗಳಲ್ಲಿ ಕವನ ವಾಚನ, ಸಾಲುಮರದ ತಿಮ್ಮಕ್ಕ ಪ್ರಶಸ್ತಿ, ಪಲ್ಲಟ ರಂಗಪೋಷಕ ಪ್ರಶಸ್ತಿ ಸೇರಿದಂತೆ ಗೌರವ ಸಮ್ಮಾನಗಳು ಬಂದಿವೆ
ಪ್ರಸ್ತುತ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮವಾದ) ದ ರಾಜ್ಯ ಸಂಘಟನಾ ಸಂಚಾಲಕರಾಗಿ ಕೆಲಸ ಮಾಡುತ್ತಿದ್ದು, ಹಾಸನ ಜಿಲ್ಲೆಯಲ್ಲಿ ಆರು ದಲಿತ ಸಾಹಿತ್ಯ ಜಿಲ್ಲಾ ಸಂಘಟನಾ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ. ದಲಿತರ, ಶೋಷಿತರ, ಮಹಿಳೆಯರ, ಮಂಗಳಮುಖಿ ಅಥವಾ ತೃತಿಯ ಲಿಂಗಿಗಳ ಪರ ನಿರಂತರ ಹೋರಾಟ ನಡೆಸುತ್ತಿರುತ್ತಾರೆ.
ಸ್ವಂತ ಪತ್ರಿಕೆ ಮಾಡುವ ನಿರ್ಧಾರ ಮಾಡಿ ಭೀಮ ವಿಜಯ ಪತ್ರಿಕೆ ಪ್ರಾರಂಬಿಸಿ ಯಶಸ್ಸಿನ ಹಾದಿಯಲ್ಲಿದ್ದಾರೆ.