ದ್ವೇಷ, ಹಿಂಸೆಯ ಮೇಲೆ ನಿರ್ಮಾಣವಾದ ಆರಾಧನಾ ಸ್ಥಳವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ: ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ
ಅಭಿಷೇಕ್ ಬ್ಯಾನರ್ಜಿ | Photo: PTI
ಗುವಾಹಟಿ: ದ್ವೇಷ ಹಾಗೂ ಹಿಂಸೆಯ ಮೇಲೆ ನಿರ್ಮಾಣವಾದ ಆರಾಧನಾ ಸ್ಥಳವನ್ನು ಒಪ್ಪಿಕೊಳ್ಳುವಂತೆ ತನ್ನ ಧರ್ಮ ಬೋಧಿಸಿಲ್ಲ ಎಂದು ತೃಣಮೂಲ ಕಾಂಗ್ರೆಸ್ ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ರವಿವಾರ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕಿಂತ ಒಂದು ದಿನ ಮೊದಲು ಅವರು ಈ ಹೇಳಿಕೆ ನೀಡಿದ್ದಾರೆ.
‘‘ದ್ವೇಷ, ಹಿಂಸೆ ಹಾಗೂ ಅಮಾಯಕರ ಶವಗಳ ಮೇಲೆ ನಿರ್ಮಿಸಲಾದ ಮಂದಿರ, ಮಸೀದಿ, ಚರ್ಚ್ ಅಥವಾ ಗುರುದ್ವಾರ ಯಾವುದೇ ಆಗಿರಲಿ, ಅಂತಹ ಆರಾಧನಾ ಸ್ಥಳವನ್ನು ಒಪ್ಪಿಕೊಳ್ಳುವಂತೆ ನನಗೆ ನನ್ನ ಧರ್ಮ ಬೋಧಿಸಿಲ್ಲ’’ ಎಂದು ಅಭಿಷೇಕ್ ಬ್ಯಾನರ್ಜಿ ಅವರು ಸಾಮಾಜಿಕ ಮಾಧ್ಯಮದ ಪೋಸ್ಟ್ ನಲ್ಲಿ ಹೇಳಿದ್ದಾರೆ.
ಈ ನಡುವೆ, ತೃಣಮೂಲ ಕಾಂಗ್ರೆಸ್ ವರಿಷ್ಠೆ ಹಾಗೂ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಮವಾರ ಕೋಲ್ಕತ್ತಾದ ಕಾಲಿಘಾಟ್ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಅನಂತರ ಬೃಹತ್ ಸರ್ವಧರ್ಮ ಯಾತ್ರೆ ಕೈಗೊಳ್ಳಲಿದ್ದಾರೆ. ಈ ರ್ಯಾಲಿ ಮಸೀದಿ, ದೇವಾಲಯ, ಚರ್ಚ್ ಹಾಗೂ ಗುರುದ್ವಾರಗಳನ್ನು ಒಳಗೊಳ್ಳಲಿದೆ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಅಯೋಧ್ಯೆ ರಾಮಮಂದಿರದ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಗೈರಾಗುತ್ತಿರುವ ‘ಇಂಡಿಯಾ’ ಮೈತ್ರಿಕೂಟ ಹಲವು ಪ್ರತಿಕ್ಷಗಳೊಂದಿಗೆ ತೃಣಮೂಲ ಕಾಂಗ್ರೆಸ್ ಪಕ್ಷ ಕೂಡ ಸೇರಿದೆ. ತಾವು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಕಾಂಗ್ರೆಸ್, RJD ಹಾಗೂ ಸಿಪಿಐ (ಮಾರ್ಕ್ಸಿಸ್ಟ್) ಈಗಾಗಲೇ ಹೇಳಿವೆ.
ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರದಲ್ಲಿರುವ ಬಿಜೆಪಿ ಸರಕಾರ ಈ ಧಾರ್ಮಿಕ ಕಾರ್ಯಕ್ರಮವನ್ನು ರಾಜಕೀಯಗೊಳಿಸುತ್ತಿದೆ ಎಂದು ಪ್ರತಿಕ್ಷಗಳು ಆರೋಪಿಸಿವೆ.