ಸಾಗರ ಮುಹಮ್ಮದ್ ಹಾಜಿಗೆ 'ಅಕ್ಷರ ಸಂಗಾತಿ' ಪುರಸ್ಕಾರ: ಡಿ.15ರಂದು ಪ್ರದಾನ
ಹಾವೇರಿ: ಹಾವೇರಿಯ ಮುಈನುಸ್ಸುನ್ನಃ ಅಕಾಡಮಿ ಇದರ ಯುಎಇ ರಾಷ್ಟ್ರೀಯ ಸಮಿತಿಯ ವತಿಯಿಂದ ನೀಡುವ 'ಅಕ್ಷರ ಸಂಗಾತಿ' ಪುರಸ್ಕಾರಕ್ಕೆ ಶಿಕ್ಷಣ ಪ್ರೇಮಿ ಸಮಾಜ ಸೇವಕ ಸಾಗರ ಮುಹಮ್ಮದ್ ಹಾಜಿಯವರನ್ನು ಆಯ್ಕೆ ಮಾಡಲಾಗಿದೆ.
ಮಂಗಳೂರಿನ ಕಣ್ಣೂರು ನಿವಾಸಿಯಾಗಿರುವ ಮುಹಮ್ಮದ್ ಹಾಜಿಯವರು ಶಿವಮೊಗ್ಗ ಜಿಲ್ಲೆಯ ಸಾಗರ, ಹಾವೇರಿ ಜಿಲ್ಲೆಯ ಸವನೂರು ಸೇರಿದಂತೆ ವಿವಿಧೆಡೆ ಉದ್ಯಮವನ್ನು ಹರಡಿ ಸಾವಿರಾರು ಜನರಿಗೆ ಉದ್ಯೋಗಗಳನ್ನು ಒದಗಿಸಿದ್ದಾರೆ. ದುಡಿಮೆಯ ಒಂದಂಶವನ್ನು ಸಮಾಜಕ್ಕೆ ಸಮರ್ಪಿಸುತ್ತಿರುವ ಅವರು ಜನ ಕಲ್ಯಾಣ ಚಟುವಟಿಕೆಗಳು ಮತ್ತು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡುತ್ತಿರುವ ಸೇವೆಯನ್ನು ಪರಿಗಣಿಸಿ 'ಅಕ್ಷರ ಸಂಗಾತಿ' ಪುರಸ್ಕಾರಕ್ಕೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
ಡಿ.15 ರವಿವಾರ ದುಬೈಯ ಪರ್ಲ್ ಕ್ರೀಕ್ ಹೋಟೆಲ್ ನಲ್ಲಿ ನಡೆಯುವ 'ಅಕ್ಷರ ಸಂಚಾರ' ಸಮಾವೇಶದಲ್ಲಿ ಕಲ್ಲಿಕೋಟೆ ಜಾಮಿಅ ಮರ್ಕಝ್ ಉಪಾಧ್ಯಕ್ಷ ಸೈಯದ್ ಶಿಹಾಬುದ್ದೀನ್ ಅಹ್ದಲ್ ಮುತ್ತನೂರ್ ತಂಙಳ್ ಪ್ರಶಸ್ತಿ ಪ್ರದಾನ ಮಾಡುವರು.
ಹಾವೇರಿ ಮುಈನುಸ್ಸುನ್ನಃ ಅಕಾಡಮಿಯ ಉಪಾಧ್ಯಕ್ಷ ಕೆ.ಎಂ.ಅಬೂಬಕರ್ ಸಿದ್ದೀಕ್ ಮೊಂಟುಗೋಳಿ, ಪ್ರಧಾನ ಕಾರ್ಯದರ್ಶಿ ಮುಸ್ತಫ ನಈಮಿ ಹಾವೇರಿ, ಯುಎಇ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಹಾಜಿ ಅಬ್ದುಲ್ ರಝಾಕ್ ಜಲ್ಲಿ, ದುಬೈ ಘಟಕಾಧ್ಯಕ್ಷ ಹಾಜಿ ಅಶ್ರಫ್ ಅಡ್ಯಾರ್, ಕೆಸಿಎಫ್ ರಾಷ್ಟ್ರೀಯ ಅಧ್ಯಕ್ಷ ಇಬ್ರಾಹೀಂ ಸಖಾಫಿ ಕೆದುಂಬಾಡಿ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಅಕಾಡಮಿಯ ಪ್ರಕಟನೆ ತಿಳಿಸಿದೆ.