ಮೆಣಸಿನಕಾಯಿ ಬೆಳೆಗೆ ಕನಿಷ್ಟ ಬೆಂಬಲ ಬೆಲೆ ನಿಗದಿ ಮಾಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು : ಸಚಿವ ಶಿವಾನಂದ ಪಾಟೀಲ್
ಹಾವೇರಿ: ಮೆಣಸಿನಕಾಯಿ ಬೆಳೆಗೂ ಕನಿಷ್ಟ ಬೆಂಬಲ ಬೆಲೆ ನಿಗದಿ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಕೃಷಿ, ಸಕ್ಕರೆ ಮತ್ತು ಕಬ್ಬು ಅಭಿವೃದ್ಧಿ ಹಾಗೂ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ.
ಇಲ್ಲಿನ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರುಕಟ್ಟೆ ವ್ಯಾಪ್ತಿಯಲ್ಲಿ ಈ ಘಟನೆ ಆಗಬಾರದಿತ್ತು. ರೈತರು ಸಾಮಾನ್ಯವಾಗಿ ತಾವು ಬೆಳೆದ ಬೆಳೆಗೆ ತಕ್ಕ ಬೆಲೆ ಬರದೇ ಇದ್ದರೆ ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ಮಾಡಬಹುದು. ಆದರೆ, ಹೀಗೆ ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡಬಾರದು ಎಂದರು.
ಇಲ್ಲಿರುವಂತಹ ವರ್ತಕರು ನಮ್ಮ ಇಲಾಖೆಗಾಗಲಿ, ಮುಖ್ಯಸ್ಥರಿಗಾಗಲಿ ವಿನಂತಿ ಮಾಡಿಕೊಂಡಿದ್ದರೆ ಅದನ್ನ ಸರಿಪಡಿಸಬಹುದಿತ್ತು. ತಪ್ಪು ತಿಳುವಳಿಕೆಗೆ ಪರಿಹಾರ ಕಂಡುಕೊಳ್ಳಬಹುದಿತ್ತು. ದುರ್ದೈವ ಆಗಬಾರದಂತಹ ಘಟನೆ ಆಗಿದೆ ಎಂದ ಅವರು, ಕರ್ನಾಟಕದವರೇ ಆಗಲಿ ಹೊರ ರಾಜ್ಯದವರೇ ಇರಲಿ ಸಾರ್ವಜನಿಕ ಆಸ್ತಿಗೆ ಹಾನಿಮಾಡುವ ಕೆಲಸ ಕೆಲವು ದುಷ್ಕರ್ಮಿಗಳಿಂದ ಆಗಿರುತ್ತದೆ. ಅಂತಹವರ ಬಗ್ಗೆ ಸ್ವಲ್ಪ ನಿರ್ದಾಕ್ಷಿಣ್ಯ ಕ್ರಮವನ್ನು ಕೈಗೊಳ್ಳಲೇಬೇಕಾಗುತ್ತದೆ ಎಂದು ಹೇಳಿದರು.