ರೈತನ ಆತ್ಮಹತ್ಯೆ ಬಗ್ಗೆ ಸುಳ್ಳು ಸುದ್ದಿ ಹರಡಿದ ಆರೋಪ: ಸಂಸದ ತೇಜಸ್ವಿ ಸೂರ್ಯ, ಕನ್ನಡ ದುನಿಯ, ಕನ್ನಡ ನ್ಯೂಸ್ ಸಂಪಾದಕರ ವಿರುದ್ಧ ಪ್ರಕರಣ ದಾಖಲು
Photo credit: X@Tejasvi_Surya
ಹಾವೇರಿ: 'ವಕ್ಫ್ ಬೋರ್ಡ್ ಆಸ್ತಿ ಕಿರಿಕಿರಿಗೆ ಬೇಸತ್ತು ಯುವ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ' ಎಂಬ ವಿಚಾರವಾಗಿ ಸುಳ್ಳು ಮಾಹಿತಿ ಹರಡಿದ ಆರೋಪದಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಹಾವೇರಿಯ ಸೆನ್(ಸೈಬರ್, ಆರ್ಥಿಕ ಹಾಗೂ ಮಾದಕ ದ್ರವ್ಯ ನಿಯಂತ್ರಣ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೇ ವಿಚಾರವಾಗಿ ಕನ್ನಡ ದುನಿಯ ಇ-ಪೇಪರ್ ಸಂಪಾದಕ, ಕನ್ನಡ ನ್ಯೂಸ್ ಇ-ಪೇಪರ್ ಸಂಪಾದಕರ ವಿರುದ್ಧವೂ FIR ದಾಖಲಾಗಿದೆ.
ಸುನೀಲ್ ಹುಚ್ಚಣ್ಣನವರ ಎಂಬವರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ವಕ್ಫ್ ಕಾರಣ ಹಾವೇರಿ ಜಿಲ್ಲೆಯ ಹರನಗಿ ಗ್ರಾಮದಲ್ಲಿ ರುದ್ರಪ್ಪ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಸುಳ್ಳು ಸುದ್ದಿಯನ್ನು ಕನ್ನಡ ದುನಿಯಾ, ಕನ್ನಡ ನ್ಯೂಸ್ ಸುದ್ದಿ ಮಾಧ್ಯಮಗಳು ಪ್ರಕಟಿಸಿದ್ದವು. ಈ ಸುಳ್ಳು ಸುದ್ದಿಯನ್ನು ಸಂಸದ ತೇಜಸ್ವಿ ಸೂರ್ಯ ತನ್ನ ಎಕ್ಸ್ ಖಾಯೆಯಲ್ಲಿ ಹಂಚಿಕೊಂಡು, ‘ಸಿಎಂ ಸಿದ್ದರಾಮಯ್ಯ ಮತ್ತು ವಕ್ಫ್ ಸಚಿವ ಝಮೀರ್ ಅಹ್ಮದ್ ಅವರ ಅಲ್ಪಸಂಖ್ಯಾತರ ತುಷ್ಟೀಕರಣದಿಂದ ಕರ್ನಾಟಕದಲ್ಲಿ ದುರಂತಗಳು ಸಂಭವಿಸುತ್ತಿವೆ. ಪ್ರತಿ ದಿನ ಇಂಥ ಘಟನೆಗಳು ಸಂಭವಿಸುತ್ತಿವೆ’ ಎಂದು ಪೋಸ್ಟ್ ಕೂಡಾ ಹಾಕಿದ್ದರು.
ಆದರೆ ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ನಮೂದಾದ ಕಾರಣದಿಂದ ಮನನೊಂದು ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಸುಳ್ಳು ಸುದ್ದಿ ಎಂದು ಹಾವೇರಿ ಜಿಲ್ಲಾ ಪೊಲೀಸ್ ತನ್ನ ಎಕ್ಸ್ ಖಾತೆಯಲ್ಲಿ ಫ್ಯಾಕ್ಟ್ ಚೆಕ್ ಜೊತೆ ಸ್ಪಷ್ಟನೆ ನೀಡಿತ್ತು. ಲಕ್ಷಾಂತರ ರೂ. ಸಾಲ ಮಾಡಿ ಬೆಳೆದ ಬೆಳೆ ಮಳೆಯಿಂದ ಹಾನಿಗೀಡಾಗಿದ್ದರಿಂದ ನೊಂದು ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಹಾವೇರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಸ್ಪಷ್ಟನೆ ನೀಡಿದ್ದರು.
“ಬೆಳೆ ಹಾನಿಯಾಗಿದ್ದರಿಂದ ಸಾಲ ಮಾಡಿದ್ದ ರುದ್ರಪ್ಪ ಸಾಲಬಾಧೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದು ಪೊಲೀಸ್ ತನಿಖೆಯಿಂದ ದೃಢಪಟ್ಟಿತ್ತು. ಈ ಬಗ್ಗೆ ತಹಶೀಲ್ದಾರ್ ರಿಗೆ ವರದಿ ಸಲ್ಲಿಸಲಾಗಿತ್ತು. ಮೃತರ ಕುಟುಂಬಕ್ಕೆ ಸರಕಾರವು 5 ಲಕ್ಷ ರೂ. ಪರಿಹಾರ ಒದಗಿಸಿದೆ” ಎಂದು ಫ್ಯಾಕ್ಟ್ ಚೆಕ್ ಪ್ರಕಟನೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟಪಡಿಸಿದ್ದರು.
ಆ ಬಳಿಕ ತೇಜಸ್ವಿ ಸೂರ್ಯ ತನ್ನ ಟ್ವೀಟ್ ಅನ್ನು ಅಳಿಸಿ ಹಾಕಿದ್ದರು.
ಆದರೆ ಇದೇ ವಿಚಾರವಾಗಿ ಇದೀಗ ತೇಜಸ್ವಿ ಸೂರ್ಯ, ಕನ್ನಡ ದುನಿಯಾ ಹಾಗೂ ಕನ್ನಡ ನ್ಯೂಸ್ ಚಾನೆಲ್ ಸಂಪಾದಕರ ವಿರುದ್ಧ FIR ದಾಖಲಾಗಿದೆ.
ಕಾನೂನು ಕ್ರಮ ಸರಿಯಿದೆ : ಪರಮೇಶ್ವರ್
ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿ ಹಂಚಿಕೊಂಡಿದ್ದಕ್ಕೆ ಸಂಸದ ತೇಜಸ್ವಿ ಸೂರ್ಯ ಮೇಲೆ ಕಾನೂನು ಕ್ರಮ ಕೈಗೊಂಡಿದ್ದು ಸರಿಯಿದೆ. ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯ ಸಂದೇಶ ಹಾಕಿ ಜನರಿಗೆ ತಪ್ಪು ಮಾಹಿತಿ ನೀಡುತ್ತಾರೆ. ಹೀಗಾಗಿ ಕಾನೂನಿನಲ್ಲಿ ಕ್ರಮ ತೆಗೆದುಕೊಳ್ಳಲು ಅವಕಾಶವಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.