ಶಿಗ್ಗಾಂವಿ ಕ್ಷೇತ್ರಕ್ಕೆ ಬೊಮ್ಮಾಯಿ ಕೊಡುಗೆ ಶೂನ್ಯ : ಈಶ್ವರ್ ಖಂಡ್ರೆ
ಈಶ್ವರ್ ಖಂಡ್ರೆ
ಹಾವೇರಿ : ಜಿಲ್ಲೆಯ ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಇದೆ. ನಾಲ್ಕು ಸಲ ಬಸವರಾಜ ಬೊಮ್ಮಾಯಿ ಅವರನ್ನು ಜನ ಆಯ್ಕೆ ಮಾಡಿದ್ದಾರೆ. ಆದರೂ, ಈ ಕ್ಷೇತ್ರದ ಅಭಿವೃದ್ಧಿಗೆ ಅವರ ಕೊಡುಗೆ ಶೂನ್ಯ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಆರೋಪಿಸಿದ್ದಾರೆ.
ಶನಿವಾರ ಶಿಗ್ಗಾಂವಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಸ್ತೆ ನಿರ್ಮಾಣ ಮಾಡಿದ್ದಾರಾ? ನೀರಾವರಿ ಯೋಜನೆ ಮಾಡಿದ್ದಾರಾ? ಪ್ರತಿ ಗ್ರಾಮಕ್ಕೆ ಶುದ್ಧವಾದ ಕುಡಿಯುವ ನೀರು ಕೊಡಲಿಕ್ಕೆ ಆಗಿಲ್ಲ ಅವರಿಗೆ. ಈ ಕ್ಷೇತ್ರದ ಜನರನ್ನ ನಿರ್ಲಕ್ಷ ಮಾಡಿದ್ದಾರೆ. ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದರು.
ಪಂಚಮಸಾಲಿ ಸಮುದಾಯಕ್ಕೆ ಟಿಕೆಟ್ ಕೊಡಿಸುತ್ತೇವೆ ಎಂದು ಹೇಳಿದ್ದರು. ಆದರೆ ಏನು ಪುತ್ರ ವ್ಯಾಮೋಹದಿಂದ ತಮ್ಮ ಮಗನಿಗೆ ಟಿಕೆಟ್ ಕೊಡಿಸಿದರು. ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಒಂದು ದಿನಾ ಆದರೂ ಜನರ ಸೇವೆ ಮಾಡಿದ್ದಾನಾ? ಬಿಜೆಪಿಯವರು ಜನರಲ್ಲಿ, ಜಾತಿ, ಧರ್ಮಗಳಲ್ಲಿ ಕಲಹ ಸೃಷ್ಟಿ ಮಾಡಿ ಸಮಾಜವನ್ನು ಒಡೆದು, ಕೋಮುಗಲಭೆ ಆಗುವ ಹಾಗೆ ಮಾಡುತ್ತಿದ್ದಾರೆ ಎಂದು ಅವರು ಕಿಡಿಗಾರಿದರು.
ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಈ ಕ್ಷೇತ್ರವನ್ನು ಅಭಿವೃದ್ಧಿ ಮಾಡುವುದಾಗಿ ವಚನ ಕೊಟ್ಟಿದ್ದಾರೆ. ನಮ್ಮ ಸರಕಾರ ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳನ್ನು ಕೊಟ್ಟಿದೆ. ಯಾವುದೇ ಮಧ್ಯವರ್ತಿಗಳು ಇಲ್ಲದೇ ಜನರಿಗೆ ಗ್ಯಾರಂಟಿಗಳ ಪ್ರಯೋಜನ ತಲುಪುತ್ತಿದೆ ಎಂದು ಅವರು ಹೇಳಿದರು.
ನ.13ರಂದು ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದೆ. ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಜನರ ಅಭಿಪ್ರಾಯ ಇದೆ. ಮುಖ್ಯಮಂತ್ರಿ ಚುನಾವಣಾ ಪ್ರಚಾರಕ್ಕೆ ಹೋಗುತ್ತಿರುವ ಕಡೆಯಲ್ಲ ಉತ್ತಮ ಸ್ಪಂದನೆ ಸಿಗುತ್ತಿದೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು.
ಬಿಜೆಪಿಯವರು ಕೇವಲ ಸುಳ್ಳುಗಳನ್ನು ಹೇಳಿಕೊಂಡು ತಿರುಗುತ್ತಿದ್ದಾರೆ. 8 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಹೇಳಿದ್ರು, ಡಿಸೇಲ್, ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ ಕ್ರಮವಾಗಿ 40-50 ರೂ.ಮಾಡುತ್ತೇವೆ ಅಂದ್ರು, ಯಾವುದು ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ ಎಂದು ಅವರು ಟೀಕಿಸಿದರು.