ಶಿಗ್ಗಾಂವಿ ಕ್ಷೇತ್ರ ಅಭಿವೃದ್ಧಿ ಮಾಡದ ಬೊಮ್ಮಾಯಿ ಅವರ 17 ವರ್ಷಗಳ ಅಧಿಕಾರ ಕೊನೆಗೊಳ್ಳಬೇಕು : ಡಿ. ಕೆ. ಶಿವಕುಮಾರ್
ಡಿ.ಕೆ.ಶಿವಕುಮಾರ್
ಹಾವೇರಿ (ಶಿಗ್ಗಾಂವಿ) : " ಶಿಗ್ಗಾಂವಿ ಕ್ಷೇತ್ರದಲ್ಲಿ ತಾತ, ಮಗನ ನಂತರ ಮೊಮ್ಮಗ ಚುನಾವಣಾ ಅಖಾಡಕ್ಕೆ ಬಂದಿದ್ದಾರೆ. ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಮಾಡದ ಬೊಮ್ಮಾಯಿ ಅವರ 17 ವರ್ಷದ ರಾಜಕಾರಣ ಕೊನೆಯಾಗಬೇಕು. ಕ್ಷೇತ್ರದ ಜನ ಕಾಂಗ್ರೆಸ್ ಗೆ ಮತ ಹಾಕಬೇಕು" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕರೆ ನೀಡಿದ್ದಾರೆ.
ಶಿಗ್ಗಾಂವಿಯ ಹೋತನಹಳ್ಳಿಯಲ್ಲಿ ಬುಧವಾರ ನಡೆದ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಸರಣಿ ವಾಗ್ದಾಳಿ ನಡೆಸಿದರು.
"ಯಾರಿಗೂ ಹೆಣ್ಣು ನೋಡಲು ಹೋಗಿ ತಾನೇ ಮದುವೆ ಆದನಂತೆ. ಬಸವರಾಜ ಬೊಮ್ಮಾಯಿ ಅವರ ಸ್ಥಿತಿ ಇದೇ ರೀತಿಯಾಗಿದೆ. ನಾನು ಮಾಧ್ಯಮಗಳಲ್ಲಿ ನೋಡುತ್ತಿದ್ದೆ. ಟಿಕೆಟ್ ನನಗೆ ಬೇಡ ಕಾರ್ಯಕರ್ತರಿಗೆ ನೀಡಿ ಎಂದು ಬೊಮ್ಮಾಯಿ ಹೇಳುತ್ತಿದ್ದರು. ಕೊನೆಗೆ ತಮ್ಮ ಮಗನಿಗೆ ಟಿಕೆಟ್ ಕೊಡಿಸಿದ್ದಾರೆ. 17 ವರ್ಷಗಳಿಂದ ಬಸವರಾಜ ಬೊಮ್ಮಾಯಿವರು ಕ್ಷೇತ್ರದ ಅಭಿವೃದ್ಧಿ ಮಾಡಿಲ್ಲ.
ಬಸವರಾಜ ಬೊಮ್ಮಾಯಿ ಅವರೇ ಕಾಂಗ್ರೆಸ್ ನೀಡಿರುವ ಒಂದೇ ಒಂದು ಯೋಜನೆ ನಿಮ್ಮ ಅವಧಿಯಲ್ಲಿ ನೀಡಿದ್ದರೆ, ನಾವು ಈ ಕ್ಷೇತ್ರ ಬಿಟ್ಟು ಹೋಗುತ್ತೇವೆ" ಎಂದು ಸವಾಲು ಹಾಕಿದರು.
"ಕಾಂಗ್ರೆಸ್ ಪಕ್ಷದ ಶಾಸಕರನ್ನು ಆಪರೇಷನ್ ಕಮಲ ಮಾಡಿ ಬಿಜೆಪಿ ಸರಕಾರ ರಚನೆ ಮಾಡಿತ್ತು. ಈ ವೇಳೆಯಲ್ಲಿ ಮುಖ್ಯಮಂತ್ರಿ ಆಗಿದ್ದ ಬೊಮ್ಮಾಯಿ ಅವರಿಗೆ ತಮ್ಮ ಕ್ಷೇತ್ರವನ್ನು ಅಭಿವೃದ್ಧಿ ಮಾಡುವ ಸದಾವಕಾಶ ಸಿಕ್ಕಿತ್ತು. ಆದರೂ ಅವರು ಕ್ಷೇತ್ರವನ್ನು ಅಭಿವೃದ್ಧಿ ಮಾಡಲಿಲ್ಲ" ಎಂದು ಕಿಡಿಕಾರಿದರು.
"ಚನ್ನಪಟ್ಟಣದ ಟಿಕೆಟ್ ಅನ್ನು ನನ್ನ ತಮ್ಮ ಸುರೇಶ್ ಗೆ ನೀಡಬಹುದಿತ್ತು. ಆದರೆ ಕಾಂಗ್ರೆಸ್ ಪಕ್ಷ ಹಾಗೂ ನಾನು ಆ ಕೆಲಸ ಮಾಡದೆ, ಬಿಜೆಪಿ ಸಹವಾಸ ಸಾಕು ಎಂದು ಕಾಂಗ್ರೆಸ್ ಸೇರಿದ ಯೋಗೇಶ್ವರ್ ಅವರಿಗೆ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್ ಸೇರಿದ ಅವರು ದಡ್ಡರೇ? ಕಾಂಗ್ರೆಸ್ ಸರಕಾರದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಅವರಿಗೆ ಅರಿವಾಗಿದೆ.
ಶಿಗ್ಗಾಂವಿ ಕ್ಷೇತ್ರದ ಜನರೇ ನಿಮ್ಮ ಮನೆ ಬಾಗಿಲಿಗೆ ಅಧಿಕಾರ ಬಂದಿದೆ. ಬೊಮ್ಮಾಯಿ ಅವರ ನೇತೃತ್ವದಲ್ಲಿ ಬಿಜೆಪಿ ಚುನಾವಣೆ ಎದುರಿಸಿತು, ಏಕೆ ಅಧಿಕಾರಕ್ಕೆ ಬರಲಿಲ್ಲ. ಯಡಿಯೂರಪ್ಪ ಅವರು ಆಪರೇಷನ್ ಕಮಲ ನಡೆಸಿ ಸರಕಾರ ಮಾಡಿದರು. ಆದರೆ ಈ ಬಾರಿ ಅವರ ನಾಣ್ಯ ಚಲಾಚಣೆಯಾಗಲಿಲ್ಲ" ಎಂದರು.
"ರಾಜ್ಯದಲ್ಲಿ ಮುಂದಿನ ಎಂಟುವರೆ ವರ್ಷಗಳ ಕಾಲ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿರುತ್ತದೆ. ಇಲ್ಲಿ ಕೇವಲ ಯಾಸಿರ್ ಪಠಾಣ್ ಮಾತ್ರ ಅಭ್ಯರ್ಥಿಯಲ್ಲ. ಡಿ.ಕೆ.ಶಿವಕುಮಾರ್ ಹಾಗೂ ವೇದಿಕೆಯಲ್ಲಿ ಇರುವ ಸಚಿವರೆಲ್ಲಾ ಅಭ್ಯರ್ಥಿಗಳು.
"ವೀರೇಂದ್ರ ಪಾಟೀಲ್ ಅವರು ಮುಖ್ಯಮಂತ್ರಿಗಳಾಗಿದ್ದಾಗ, ಬಗರ್ ಹುಕುಂ ಅರ್ಜಿ ಹಾಕಿಸಿ ರೈತರಿಗೆ ಜಮೀನು ನೀಡುವ ಮಹತ್ತರವಾದ ಕೆಲಸ ಆರಂಭವಾಯಿತು. ಇಂದಿರಾ ಗಾಂಧಿ, ದೇವರಾಜ ಅರಸು ಅವರ ಕಾಲದಲ್ಲಿ ಭೂ ಸುಧಾರಣಾ ಕಾಯ್ದೆಗಳನ್ನು ಜಾರಿಗೆ ತಂದು, ಉಳುವವನೇ ಭೂಮಿಯ ಒಡೆಯ ಕಾನೂನನ್ನು ಜಾರಿಗೆ ತರಲಾಯಿತು. ವೃದ್ಧಾಪ್ಯ ವೇತನ, ವಿಧವಾ ವೇತನವನ್ನು ಅಶಕ್ತರಿಗೆ ನೀಡಲಾಯಿತು.
ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಗಳಾದಾಗ ಅನ್ನಭಾಗ್ಯ, ಕ್ಷೀರ ಭಾಗ್ಯ, ಕೃಷಿ ಭಾಗ್ಯ ಯೋಜನೆಗಳು ಜಾರಿಗೆ ಬಂದವು. 2023 ರಲ್ಲಿ ಅಧಿಕಾರಕ್ಕೆ ಬರುವ ಮುಂಚಿತವಾಗಿ ಕರ್ನಾಟಕದ ಜನರ ಬಳಿ ಮನವಿ ಮಾಡಿ 'ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸವಿಡಿ' ಎಂದೆವು. ಜನ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದರು. ಕಾಂಗ್ರೆಸ್ ಭಾವನೆ ಮೇಲೆ ರಾಜಕಾರಣ ಮಾಡುವುದಿಲ್ಲ, ಬದುಕಿನ ಮೇಲೆ ರಾಜಕಾರಣ ಮಾಡುತ್ತದೆ ಎಂದು ಹಳ್ಳಿ, ಹಳ್ಳಿಯನ್ನು ಸುತ್ತಿ ಜನ ಜಾಗೃತಿ ಮಾಡಿದೆವು" ಎಂದರು.
ಲಕ್ಮೀ ಹೆಬ್ಬಾಳ್ಕರ್ ಅವರ ನೇತೃತ್ವದಲ್ಲಿ1.29 ಕೋಟಿ ರೂ. ಮಹಿಳೆಯರ ಖಾತೆಗೆ ನೇರವಾಗಿ, ಯಾರ ಮಧ್ಯಸ್ತಿಕೆಯೂ ಇಲ್ಲದೆ ಗೃಹಲಕ್ಷ್ಮೀ ಯೋಜನೆಯ 2 ಸಾವಿರ ರೂ. ಹಣ ತಲುಪುತ್ತಿದೆ. 1.65 ಕೋಟಿ ಕುಟುಂಬಗಳಿಗೆ ಉಚಿತ ವಿದ್ಯುತ್ ಯೋಜನೆ ತಲುಪುತ್ತಿದೆ. ಐದು ಕೆಜಿ ಅಕ್ಕಿ, ಐದು ಕೆಜಿ ಅಕ್ಕಿಯ ಬದಲಾಗಿ ಹಣ ನೀಡುತ್ತಿದ್ದೇವೆ. ಯುವಕರಿಗೆ ಉದ್ಯೋಗವಿಲ್ಲ ಮೋದಿ ಅವರು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಹೇಳಿ ಏನೂ ಮಾಡಿಲ್ಲ. ಅವರಿಗೂ ಸಹಾಯ ಮಾಡಿ ಎನ್ನುವ ಯುವ ಕಾಂಗ್ರೆಸ್ ಅವರ ಮನವಿಯ ಮೇರೆಗೆ ಯುವನಿಧಿ ನೀಡಲಾಗುತ್ತಿದೆ" ಎಂದು ಸಮರ್ಥಿಸಿಕೊಂಡರು.
"ಬಿಜೆಪಿ ಬಡವರ ಪರವಾಗಿ ಒಂದೇ ಒಂದು ಬಡವರ ಪರವಾದ ಕೆಲಸ ಮಾಡಿಲ್ಲ. ಬಿಜೆಪಿಯಿಂದ ಒಂದೇ ಒಂದು ಕುಟುಂಬಕ್ಕೆ ಅನುಕೂಲವಾಗಿಲ್ಲ. ಕಾಂಗ್ರೆಸ್ ಉದ್ಯೋಗ ಖಾತ್ರಿ, ಪರಿಶಿಷ್ಟ ಜಾತಿ ಪಂಗಡದ ಅಭಿವೃದ್ಧಿಗೆ ಪ್ರತ್ಯೇಕ ಹಣವನ್ನು ಮೀಸಲಿಟ್ಟಿದ್ದೇವೆ.
ಹಿಂದೂ, ಮುಸಲ್ಮಾನ್ ಎಂದು ಧರ್ಮಗಳಿವೆ, ವಿಷಬೀಜ ಬಿತ್ತುವುದೇ ಬಿಜೆಪಿಯ ಕೆಲಸ. ಹಿಂದು ಮುಂದು ಎಂದು ಬಿಜೆಪಿಯವರು ಹೇಳುತ್ತಾರೆ. ಕಾಂಗ್ರೆಸ್ ಅವರು ನಾವೆಲ್ಲಾ ಒಂದು ಎಂದು ಹೇಳುತ್ತೇವೆ. ಇದು ನಮಗೂ ಅವರಿಗೂ ಇರುವ ವ್ಯತ್ಯಾಸ" ಎಂದರು.
"ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ. ಕೇಂದ್ರದಲ್ಲಿ ಉತ್ತಮ ವಿರೋಧಪಕ್ಷವಾಗಿ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಮುನ್ನಡೆಯುತ್ತಿದೆ. ಭವಿಷ್ಯದಲ್ಲಿ ಈ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. 2023 ರಲ್ಲಿಯೂ ಬೊಮ್ಮಾಯಿ ಅವರ ನೇತೃತ್ವದಲ್ಲಿ ಮತ್ತೆ ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತರಲು ಕಸರತ್ತು ನಡೆಸಿದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉತ್ತಮ ಮತವನ್ನು ಪಡೆದಿದ್ದರು. ಕೇವಲ 8000 ಮತಗಳ ಅಂತರದಿಂದ ಸೋತರು. ಈ ಉಪಚುನಾವಣೆಯಲ್ಲಿ ಲೋಕಸಭೆಗಿಂತ ಹೆಚ್ಚಿನ ಮತಗಳನ್ನು ಪೈಲ್ವಾನ್ ಪಠಾಣ್ ಅವರು ಪಡೆಯುತ್ತಾರೆ. ಕನಿಷ್ಠ 25,000 ಮತಗಳ ಅಂತರದಿಂದ ಗೆದ್ದು ವಿಧಾನಸೌಧ ಪ್ರವೇಶಿಸುತ್ತಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
"ಐದು ಬೆರಳು ಸೇರಿ ಕೈ ಮುಷ್ಠಿಯಾಯಿತು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಗಿದೆ. ಕಮಲ ಕೆರೆಯಲ್ಲಿದ್ದರೆ ಚಂದ, ತೆನೆ ಹೊಲದಲ್ಲಿದ್ದರೆ ಚಂದ, ಈ ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚಂದ ಎಂದು ಹೇಳಿದರು.
ಅಜ್ಜಂಪಿರ್ ಖಾದ್ರಿ ಅವರು ಪಕ್ಷಕ್ಕೆ ಬೆನ್ನೆಲುಬಾಗಿ, ಅಭ್ಯರ್ಥಿಯ ಗೆಲುವಿಗೆ ನಿಂತಿದ್ದಾರೆ. ಶಂಕರ್, ಬೇಬಿನಮರದ, ಪ್ರೇಮಾ ಪಾಟೀಲ್, ರಾಜು ಕುನ್ನೂರು ಸೇರಿದಂತೆ ಅನೇಕ ಮುಖಂಡರು ಯಾಸಿರ್ ಪಠಾಣ್ ಅವರ ಪರವಾಗಿ ನಿಂತಿದ್ದಾರೆ" ಎಂದು ತಿಳಿಸಿದರು.