ಕಾರ್ಮಿಕರು, ರೈತರು, ಮಹಿಳೆಯರು ಸೇರಿ ಎಲ್ಲ ವರ್ಗಗಳಿಗೆ ಆರ್ಥಿಕ ಶಕ್ತಿ ನೀಡುವುದು ಕಾಂಗ್ರೆಸ್ ಮಾತ್ರ : ಸಿಎಂ ಸಿದ್ದರಾಮಯ್ಯ
"ರಾಜ್ಯದಲ್ಲಿ ಒಬ್ಬ ಕುರುಬರಿಗೂ ಟಿಕೆಟ್ ನೀಡದ ಮೋದಿ, ಕಂಬಳಿ ವೇಷ ಹಾಕಿಕೊಂಡು ಡ್ರಾಮಾ ಮಾಡುತ್ತಿದ್ದಾರೆ"
Photo : x/@siddaramaiah
ರಾಣೆಬೆನ್ನೂರು : ಕಾರ್ಮಿಕರು, ರೈತರು, ಮಹಿಳೆಯರು, ಶ್ರಮಿಕರು, ಹಿಂದುಳಿದವರು ಸೇರಿ ಎಲ್ಲ ವರ್ಗಗಳಿಗೆ ಆರ್ಥಿಕ ಶಕ್ತಿ ನೀಡುವುದು ಕಾಂಗ್ರೆಸ್ ಮಾತ್ರ. ಇತಿಹಾಸ ತೆಗೆದು ನೋಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದ ಗಡ್ಡದೇವರ ಮಠ ಅವರ ಗೆಲುವಿನ ಸಂದೇಶ ನೀಡಲು ನಡೆಸಿದ ಜನಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
"ಕುರುಬರು ಈ ಬಾರಿ ದಯಮಾಡಿ ಯಾಮಾರಬೇಡಿ. ಬಿಜೆಪಿಗೆ ಮತ ಹಾಕಿ ಮೋಸ ಹೋಗಬೇಡಿ. ಕಂಬಳಿ ವೇಷದ ಮೋದಿಯವರದ್ದು ಕೇವಲ ಡ್ರಾಮಾ. ರಾಜ್ಯದಲ್ಲಿ ಒಬ್ಬೇ ಒಬ್ಬ ಕುರುಬರಿಗೂ ಟಿಕೆಟ್ ನೀಡದ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದು ಕರಿ ಕಂಬಳಿ ವೇಷ ಹಾಕೊಂಡು ಡ್ರಾಮಾ ಮಾಡುತ್ತಿದ್ದಾರೆ ಎಂದು ಹೇಳಿದರು.
ಮೋದಿಯಿಂದ ಸುಳ್ಳುಗಳ ಸುರಿಮಳೆ
ಈ ಬಾರಿ ಎನ್ಡಿಎ ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದು ಖಚಿತವಾಗಿ ಮೋದಿ ಹತಾಶರಾಗಿದ್ದಾರೆ. ಬಾಯಿಗೆ ಬಂದಂತೆ ಸುಳ್ಳುಗಳ ಸುರಿಮಳೆ ಸುರಿಸುತ್ತಿದ್ದಾರೆ. ನಾಚಿಕೆ ಇಲ್ಲದೆ ಸುಳ್ಳು ಹೇಳುತ್ತಿದ್ದಾರೆ. ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದೆ. ಕಾಂಗ್ರೆಸ್ ಹಿಂದುಳಿದವರ ಮೀಸಲಾತಿ ಕಿತ್ತುಕೊಳ್ಳುತ್ತದೆ ಎನ್ನುವ ಸುಳ್ಳುಗಳನ್ನು ಸೃಷ್ಠಿಸುತ್ತದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಡ್ಯಾನ್ಸ್ ಮಾಡಿಕೊಂಡು ಕಾಲ ಕಳೆದರು
ಹಾವೇರಿ ಲೋಕಸಭಾ ಕ್ಷೇತ್ರದ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಗಿದ್ದಾಗ ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿ ಪಡಿಸಿ ಎಂದರೆ ಮೋದಿ ಹೇಳಿದಂತೆ ಡ್ಯಾನ್ಸ್ ಮಾಡಿಕೊಂಡು ಕಾಲ ಕಳೆದರು ಎಂದು ವ್ಯಂಗ್ಯವಾಡಿದರು.
ಹಾವೇರಿ ಗದಗ ಜಿಲ್ಲೆಗೆ ಮುಖ್ಯಮಂತ್ರಿಯಾಗಿ ನಯಾಪೈಸೆ ಅನುಕೂಲ ಮಾಡದ ಬೊಮ್ಮಾಯಿ ಅವರನ್ನು ಸೋಲಿಸಿ ಮನೆಗೆ ಕಳುಹಿಸಿ ಎಂದು ಕರೆ ನೀಡಿದರು.
ಮನಮೋಹನ್ ಸಿಂಗ್ ಪ್ರಧಾನಿಯಾಗಿ ಇಡೀ ದೇಶದ ರೈತರ 76 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ನಾನು ಮುಖ್ಯಮಂತ್ರಿಯಾಗಿ ಸಾಲ ಮನ್ನಾ ಮಾಡಿದೆ. ನಾವು ಮಾಡಿದ ಕಸಲಸವನ್ನು ಮೋದಿಯಾಗಲಿ, ಬೊಮ್ಮಾಯಿ ಆಗಲಿ ಏಕೆ ಮಾಡಲಾಗಲಿಲ್ಲ ಎಂದು ಪ್ರಶ್ನಿಸಿದರು.