ಮುಖ್ಯಮಂತ್ರಿಯಾದರೂ ಶಿಗ್ಗಾಂವಿಗೆ ಸಾಕ್ಷಿಗುಡ್ಡೆಗಳ ಬಿಟ್ಟು ಹೋಗದ ಬೊಮ್ಮಾಯಿ : ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್
ಹಾವೇರಿ : ರಾಜ್ಯದ ಮುಖ್ಯಮಂತ್ರಿಯಾದರೂ ಯಾವುದೇ ಸಾಕ್ಷಿಗುಡ್ಡೆಗಳನ್ನು ಬಸವರಾಜ ಬೊಮ್ಮಾಯಿ ಅವರು ತಮ್ಮ ಕ್ಷೇತ್ರದ ಜನತೆಗೆ ನೀಡಿಲ್ಲ. ನಮ್ಮ ಗ್ಯಾರಂಟಿ ಯೋಜನೆಗಳಂತೆ ಒಂದೇ ಒಂದು ಯೋಜನೆಗಳನ್ನು ಅವರು ಜಾರಿಗೊಳಿಸಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ.
ಗುರುವಾರ ಶಿಗ್ಗಾಂವಿ ಕ್ಷೇತ್ರದ ದುಂಡಸಿ ಗ್ರಾಮದಲ್ಲಿ ನಡೆದ ಬಹಿರಂಗ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕೊಟ್ಟ ಮಾತನ್ನು ಉಳಿಸಿಕೊಳ್ಳದ ಬೊಮ್ಮಾಯಿ ಅವರ ನಡೆಯ ಬಗ್ಗೆ ಕ್ಷೇತ್ರದ ಜನರು ತೀರ್ಮಾನ ಮಾಡುತ್ತಾರೆ. ಬಸವರಾಜ ಬೊಮ್ಮಾಯಿ ಅವರೇ, ನೀವು ಎರಡೂವರೆ ವರ್ಷಗಳ ಕಾಲ ಸಿಎಂ ಆಗಿದ್ದಿರಿ, ಜೊತೆಗೆ ಕೇಂದ್ರದಲ್ಲಿಯೂ ನಿಮ್ಮ ಸರಕಾರ ಅಧಿಕಾರದಲ್ಲಿತ್ತು. ಅಧಿಕಾರ ಇದ್ದರೂ ನಿಮ್ಮ ಕ್ಷೇತ್ರಕ್ಕೆ ಕೊಟ್ಟಿರುವ ಕೊಡುಗೆ ಏನು? ಯಾವ ಸಾಕ್ಷಿಗುಡ್ಡೆಗಳನ್ನು ಬಿಟ್ಟು ಹೋಗಿದ್ದೀರಿ ಎಂದು ಪ್ರಶ್ನಿಸಿದರು.
ಬೊಮ್ಮಾಯಿ ಅವರು ಮಹದಾಯಿ ಯೋಜನೆಗೆ ಅನುಮತಿ ಸಿಕ್ಕೇಬಿಟ್ಟಿತು ಎಂದು ಪಟಾಕಿ ಹೊಡೆದು ಸಂಭ್ರಮಿಸಿದರು. ಆದರೆ, ಇದಕ್ಕೆ ಕೇಂದ್ರ ಪರಿಸರ ಇಲಾಖೆಯವರು ಇನ್ನೂ ಅನುಮತಿ ಕೊಟ್ಟಿಲ್ಲ. ಬಿಜೆಪಿಯಿಂದ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಆಗಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿ ರೂ. ಕೊಡುತ್ತೇವೆ ಎಂದಿದ್ದರು. ಇದುವರೆಗೂ ಸಾಮಾನ್ಯ ಜನರ ಬದುಕಿಗೆ ಯಾವ ಸಹಾಯವನ್ನೂ ಬಿಜೆಪಿ ಮಾಡಿಲ್ಲ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಶಿಗ್ಗಾಂವಿ ಪಕ್ಕದ ಸೊರಬ ಕ್ಷೇತ್ರದಿಂದ ಬಂಗಾರಪ್ಪ ಅವರು ಹಿಂದೆ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಆ ಸಮಯದಲ್ಲಿ ಆರಾಧನಾ, ಆಶ್ರಯ, ವಿಶ್ವ ಹೀಗೆ ಹಲವಾರು ಬಡವರ ಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರು. ರೈತರ ಪಂಪಸೆಟ್ಗೆ ಉಚಿತ ವಿದ್ಯುತ್ ಯೋಜನೆ ಕೊಟ್ಟರು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ವೀರೇಂದ್ರ ಪಾಟೀಲ್ ಅವರು ಮುಖ್ಯಮಂತ್ರಿಗಳಾಗಿದ್ದಾಗ ಬಗರ್ ಹುಕುಂ ಅರ್ಜಿ ಹಾಕಿಸಿ ರೈತರಿಗೆ ಜಮೀನು ನೀಡುವ ಮಹತ್ತರವಾದ ಕೆಲಸ ಆರಂಭವಾಯಿತು. ದೇವರಾಜ ಅರಸು ಅವರ ಕಾಲದಲ್ಲಿ ಭೂ ಸುಧಾರಣಾ ಕಾಯ್ದೆಗಳನ್ನು ಜಾರಿಗೆ ತಂದು, ಉಳುವವನೇ ಭೂಮಿಯ ಒಡೆಯ ಕಾನೂನನ್ನು ಜಾರಿಗೆ ತರಲಾಯಿತು. ಇಂದಿರಾ ಗಾಂಧಿ ಅವರು ಬ್ಯಾಂಕ್ಗಳನ್ನು ರಾಷ್ಟ್ರೀಕರಣ ಮಾಡಿದರು. ಇದರಿಂದ ಸಾಲ ಪಡೆದು ಹೆಚ್ಚು ಬಡ್ಡಿಯಿಂದ ಸಂಕಷ್ಟಕ್ಕೆ ಒಳಗಾಗುತ್ತಿದ್ದ ಜನರನ್ನು ಕಾಪಾಡಿದರು. ವೃದ್ಧಾಪ್ಯ ವೇತನ, ವಿಧವಾ ವೇತನವನ್ನು ಅಶಕ್ತರಿಗೆ ನೀಡಲಾಯಿತು ಎಂದು ಡಿ.ಕೆ.ಶಿವಕುಮಾರ್ ವಿವರಿಸಿದರು.
ಎಸ್.ಎಂ.ಕೃಷ್ಣ ಅವರು ಮಕ್ಕಳಿಗೆ ಬಿಸಿಯೂಟ, ಸ್ತ್ರೀ ಶಕ್ತಿ ಸಂಘಗಳನ್ನು ಸ್ಥಾಪಿಸಿ ಮಹಿಳೆಯರನ್ನು ಸಂಘಟಿಸಿದರು. ನಾವು 2023ರಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದ ತಕ್ಷಣ ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳನ್ನು ನೀಡಿದೆವು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಪಠಾಣ್ ಉಪಕಾರ ಸ್ಮರಣೆ ಇರುವ ಅಭ್ಯರ್ಥಿ. ಅವರನ್ನು ವಿಧಾನಸಭೆಗೆ ಕಳುಹಿಸಬೇಕು. ಬಸವರಾಜ ಬೊಮ್ಮಾಯಿ ಅವರು ಹೊಸದಿಲ್ಲಿಯಲ್ಲಿ ಇರಲಿ, ಇಲ್ಲಿನ ಜನರ ಸೇವೆಗೆ ಪಠಾಣ್ ಇರಲಿ. ಮುಂದೆಯೂ ಕಾಂಗ್ರೆಸ್ ಸರಕಾರ ಇರಲಿದ್ದು, ನಿಮ್ಮ ಎಲ್ಲಾ ಕೆಲಸಗಳನ್ನು ಈಡೇರಿಸುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಕ್ಷೇತ್ರದಲ್ಲಿ ಘಟಾನುಘಟಿ ಬಿಜೆಪಿ ನಾಯಕರು ಕಾಂಗ್ರೆಸ್ ಸೇರುತ್ತಿದ್ದಾರೆ. ಒಬ್ಬೊಬ್ಬರಿಗೂ ನೂರಾರು ಮತಗಳನ್ನು ಸೆಳೆಯುವ ಶಕ್ತಿಯಿದೆ. ಬಿಜೆಪಿ ಮುಂದಿನ ದಿನಗಳಲ್ಲಿ ಇರುವುದಿಲ್ಲ ಎನ್ನುವುದು ಅರ್ಥವಾಗಿ ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಬೊಮ್ಮಾಯಿ ಭೇಟಿಗೆ ಏಜೆಂಟ್ಗಳು ಬೇಕಂತೆ :
ನಾವು ಯಾವುದೇ ಜಾತಿ ಮತಗಳನ್ನು ನೋಡದೆ ಯೋಜನೆಗಳನ್ನು ನೀಡುತ್ತಿದ್ದೇವೆ. ಬಿಜೆಪಿ ಪಕ್ಷಕ್ಕೆ ಮತ ಹಾಕಿದವರಿಗೂ ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೇವೆ. ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಲು ಕ್ಷೇತ್ರದ ಜನರಿಗೆ ಸಾಧ್ಯವಾಗುತ್ತಿಲ್ಲ. ಭೇಟಿ ಮಾಡಬೇಕು ಎಂದರೆ ಏಜೆಂಟ್ ಅಥವಾ ಮುಖಂಡರು ಜೊತೆಯಲ್ಲಿ ಇರಬೇಕಂತೆ. ನಮ್ಮನ್ನು ಭೇಟಿಯಾಗಲು ಯಾರೂ ಬೇಡ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಬೊಮ್ಮಾಯಿ ಸ್ಥಿತಿ ಶೋಚನೀಯ :
ಬಸವರಾಜ ಬೊಮ್ಮಾಯಿ ಅವರ ತಂದೆಯವರು ಮುಖ್ಯಮಂತ್ರಿಗಳಾಗಿದ್ದರು. ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾದರು. ಈಗ ಕ್ಷೇತ್ರದ ಟಿಕೆಟ್ ಅನ್ನು ಕಾರ್ಯಕರ್ತರಿಗೆ ಕೊಡುತ್ತೇನೆ ಎಂದು ಹೇಳಿ ತಮ್ಮ ಮಗನಿಗೆ ಕೊಡಿಸಿದ್ದಾರೆ ಎಂದು ನಾನು ಮಾಧ್ಯಮಗಳಲ್ಲಿ ಓದಿದ್ದೆ. ಯಾರಿಗೋ ಹೆಣ್ಣು ನೋಡಲು ಹೋಗಿ ತಾನೇ ಮದುವೆ ಆದನಂತೆ. ಬಸವರಾಜ ಬೊಮ್ಮಾಯಿ ಅವರ ಸ್ಥಿತಿ ಅದೇ ರೀತಿ ಆಗಿದೆ ಎಂದು ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದರು.