ಶಿಗ್ಗಾಂವಿ | ಭಗವಾಧ್ವಜ ತೆರವಿಗೆ ಸಂಚು ಆರೋಪ: ಮಾಜಿ ಶಾಸಕ ಸಹಿತ ಇಬ್ಬರ ವಿರುದ್ಧ ಪ್ರಕರಣ ದಾಖಲು
ಹಾವೇರಿ: ಶಿಗ್ಗಾಂವಿ ತಾಲೂಕಿನ ಕಾರಡಗಿ ಗ್ರಾಮದ ಕನ್ನಡ ಶಾಲೆಯ ಹತ್ತಿರ ಸುಮಾರು ವರ್ಷಗಳಿಂದ ಇರುವ ಭಗವಾಧ್ವಜವನ್ನು ತೆರವುಗೊಳಿಸಲು ಸಂಚು ರೂಪಿಸಿದ ಆರೋಪದಲ್ಲಿ ಮಾಜಿ ಶಾಸಕ ಸೈಯದ್ ಅಜಂಪೀರ್ ಖಾದ್ರಿ ಸಹಿತ ಇಬ್ಬರ ವಿರುದ್ಧ ಹುಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಲ್ಲಿನ ಅಂಜುಮನ್ ಕಮಿಟಿಯ ಅಧ್ಯಕ್ಷ ರಬ್ಬಾನಿ ಸವಣೂರ ಎಂಬವರ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಶಾಸಕ ಸೈಯದ್ ಅಜಂಪೀರ್ ಖಾದ್ರಿ ಮತ್ತು ರಬ್ಬಾನಿ ಮಧ್ಯೆ ಮಾ.2ರಂದು ನಡೆದಿದೆ ಎನ್ನಲಾದ ಸಂಭಾಷಣೆಯ ಆಡಿಯೋ ಕ್ಲಿಪ್ ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಅಜಂಪೀರ್ ಖಾದ್ರಿ ಮತ್ತು ರಬ್ಬಾನಿ ವಿರುದ್ಧ ಹುಲಗೂರು ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎರಡು ಕೋಮುಗಳ ಮಧ್ಯೆ ದ್ವೇಷ ಭಾವನೆ ಹೆಚ್ಚಿಸಲು ಯತ್ನ, ಸಾರ್ವಜನಿಕ ಶಾಂತಿ ವ್ಯವಸ್ಥೆಗೆ ದಕ್ಕೆಯುಂಟು ಮಾಡಲು ಒಳಸಂಚು ರೂಪಿಸಿದ ಆರೋಪದಲ್ಲಿ ಪ್ರಕರಣ ದಾಖಲಾಗಿದೆ.
ಈ ನಡುವೆ ವೈರಲ್ ಆಡಿಯೊ ತುಣುಕನ್ನು FSL ವರದಿಗಾಗಿ ಕಳುಹಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಕಾರಡಗಿ ಗ್ರಾಮದಲ್ಲಿರುವ ಭಗವಾಧ್ವಜ ಇರುವ ಸ್ಥಳಕ್ಕೆ ಪೊಲೀಸ್ ಭದ್ರತೆ ಕಲ್ಪಿಸಿದ್ದಾರೆ.