ಹಾನಗಲ್: ಬೃಹತ್ ಈದ್ ಮೀಲಾದ್ ಜಾಥಾ; ಹಣ್ಣು ಹಂಪಲು ವಿತರಣೆ
ಹಾವೇರಿ: ಪ್ರವಾದಿ ಪೈಗಂಬರ್ ಮುಹಮ್ಮದ್ (ಸ.ಅ) ರ ಜನ್ಮ ದಿನಾಚರಣೆಯ ಪ್ರಯುಕ್ತ ದಾರುಲ್ ಹುದಾ ಕರ್ನಾಟಕ ಸೆಂಟರ್,ಅಲ್ ಹಿದಾಯ ಎಜುಕೇಷನ್ ಟ್ರಸ್ಟ್ ಹಾಗೂ ಹಾದಿಯ ಎಜುಕೇಷನ್ ಕೌನ್ಸಿಲ್ ಸಹಯೋಗದೊಂದಿಗೆ ಆಯೋಜಿಸಿದ ಬೃಹತ್ ಕಾಲ್ನಡಿಗೆ ಜಾಥಾ ಆನಿಕೆರೆ ಶಾಫಿ ಜುಮಾ ಮಸೀದಿಯಿಂದ ಹಾನಗಲ್ ಎಂ ಜಿ ಸರ್ಕಲ್ ವರೆಗೆ ನಡೆಯಿತು .
ಜಾಥಾದಲ್ಲಿ ವಿದ್ಯಾರ್ಥಿಗಳ ಫ್ಲವರ್ ಶೋ, ದಫ್ ಪ್ರದರ್ಶನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಎಚ್ ಕೆ ಎಚ್ ಜನಾಬ್ ಹಾಜಿ ಅಬ್ದುಲ್ ಕರೀಂ ಜಾಥಾವನ್ನು ಉದ್ಘಾಟಿಸಿದರು. ಜಾಥಾ ಸಂಯೋಜಕ ಹಾಜಿ ಮುನೀರ್ ಅಹ್ಮದ್,ಜನಾಬ್ ಮುಹಮ್ಮದ್ ಷರೀಫ್ ಮಂಗಳೂರು ಕಾಲ್ನಡಿಗೆ ಜಾಥಾವನ್ನು ನಿಯಂತ್ರಿಸಿದರು.
ದಾರುಲ್ ಹುದಾ ಪ್ರಾಂಶುಪಾಲ ನಸೀಫ್ ಹುದವಿ, ಉಪ ಪ್ರಾಂಶುಪಾಲ ಅಶ್ರಫ್ ಹುದವಿ, ಪಿ.ಜಿ ಹದೀಸ್ ವಿಭಾಗದ ಮುಖ್ಯಸ್ಥರುಗಳಾದ ಉನೈಸ್ ಹಿದಾಯ ಹುದವಿ, ಸ್ವಲಾಹುದ್ದೀನ್ ಹುದವಿ,ಆನಿಕೆರೆ ಹಿಫ್ಝ್ ಕಾಲೇಜಿನ ಪ್ರಾಂಶುಪಾಲ ಫಲಾಹ್ ಅಝ್ಹರಿ, ಸಿರಾಜ್ ಹಾನಗಲ್, ಸಂಸ್ಥೆಯ ಪ್ರಾಧ್ಯಾಪಕ ವೃಂದ ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.
ಸಂಸ್ಥೆಯ ವಿದ್ಯಾರ್ಥಿಗಳಿಂದ ಕನ್ನಡ, ಇಂಗ್ಲೀಷ್ ಹಾಗೂ ಉರ್ದು ಭಾಷೆಯಲ್ಲಿ ಸೌಹಾರ್ದ ಭಾಷಣ ಹಾಗೂ ನಅತೇ ಷರೀಫ್ ಆಲಾಪನೆ ನಡೆಯಿತು. ಹಾದಿಯ ಕರ್ನಾಟಕ ಕೊರ್ಡಿನೇಟರ್ ಮುಈನ್ ಹುದವಿ ಸ್ವಾಗತಿಸಿ ವಂದಿಸಿದರು.
ಹಣ್ಣು ಹಂಪಲುಗಳ ಕಿಟ್ ವಿತರಣೆ
ಈದ್ ಪ್ರಯುಕ್ತ ಎಚ್ ಕೆ ಎಚ್ ಎಂಟರ್ಪ್ರೈಸಸ್ ವತಿಯಿಂದ ಹಾನಗಲ್ ಪುರಸಭೆ ಪೌರ ಕಾರ್ಮಿಕರು,ಹಾನಗಲ್ ತಾಲೂಕು ಆಸ್ಪತ್ರೆ ಹಾಗೂ ಅಕ್ಕಿ ಆಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಣ್ಣು ಹಂಪಲುಗಳ ಕಿಟ್ ವಿತರಿಸಲಾಯಿತು.