ಹಾವೇರಿ: ತಹಶೀಲ್ದಾರ್ ಕಚೇರಿಯ ಮೇಲ್ಛಾವಣಿ ಸೋರಿಕೆ; ಕೊಡೆ ಹಿಡಿದು ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ
ಹಾವೇರಿ: ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ತಹಶೀಲ್ದಾರ್ ಕಚೇರಿಯ ಮೇಲ್ಛಾವಣಿ ಸೋರಿಕೆಯಾಗುತ್ತಿದ್ದು, ಕಚೇರಿ ಸಿಬ್ಬಂದಿ ಮಳೆಯ ನೀರಿನಿಂದ ರಕ್ಷಣೆಗೆ ಛತ್ರಿ ಹಿಡಿದು ಕೆಲಸ ನಿರ್ವಹಿಸಬೇಕಾದ ಪರಿಸ್ಥಿತಿಯುಂಟಾಗಿದೆ.
2 ನೇ ಮಹಡಿಯಿಂದ ನೆಲ ಮಹಡಿವರೆಗೂ ಕಟ್ಟಡ ಸೋರಿಕೆಯಾಗುತ್ತಿದ್ದು, ಮಹತ್ವ ದಾಖಲೆಗಳು ಹಾಗೂ ಕಂಪ್ಯೂಟರ್ ಗಳ ರಕ್ಷಣೆಗೆ ಕಚೇರಿ ಸಿಬ್ಬಂದಿ ಹರಸಾಹಸಪಡಬೇಕಾಗಿದೆ.
ಕಳಪೆ ಕಾಮಗಾರಿ, ಅವೈಜ್ಞಾನಿಕ ಸೋಲಾರ್ ಪ್ಯಾನಲ್ ಅಳವಡಿಸಿದ ಹಿನ್ನೆಲೆ ಕಟ್ಟಡ ಸೋರಿಕೆಯಾಗುತ್ತಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ಕಚೇರಿ ಸಿಬ್ಬಂದಿ ಛತ್ರಿ ಹಿಡಿದು ಕೆಲಸ ಮಾಡುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕಳೆದ 15 ವರ್ಷಗಳಿಂದ ಕಟ್ಟಡ ಸೋರುತ್ತಿದ್ದು, ಕಳೆದ ವರ್ಷ ಸಿಎಂ ಸಿದ್ದರಾಮಯ್ಯ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಭೇಟಿ ನೀಡಿ ಮೇಲ್ಚಾವಣಿಗೆ ಶೆಡ್ ಹಾಕಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ, ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಜಿಲ್ಲಾಡಳಿತ ಕೆಲಭಾಗಕ್ಕೆ ಮಾತ್ರ ಶೆಡ್ ಹಾಕಿ ಇನ್ನೂ ಕೆಲಭಾಗವನ್ನು ಹಾಗೇ ಬಿಟ್ಟಿದ್ದರಿಂದ ಕಚೇರಿಯಲ್ಲಿನ ಅಗತ್ಯ ದಾಖಲೆಗಳು ಮಳೆ ನೀರು ಪಾಲಾಗುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ.