ಈಶ್ವರಪ್ಪ ಅವರಿಗೆ ನಾನು ಮೋಸ ಮಾಡಿಲ್ಲ, ವರಿಷ್ಠರ ಆದೇಶ ಪಾಲಿಸಿದ್ದೇನೆ: ಬಸವರಾಜ ಬೊಮ್ಮಾಯಿ
ಹಾವೇರಿ : ನಾನು ಮಾಜಿ ಡಿಸಿಎಂ ಈಶ್ವರಪ್ಪ ಅವರಿಗೆ ಮೋಸ ಮಾಡಿಲ್ಲ. ನಾನು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಕಾಂತೇಶ್ ಗೆ ಟಿಕೆಟ್ ಕೊಡುವಂತೆ ಹೇಳಿದ್ದೆ. ಹೈಕಮಾಂಡ್ ನಾಯಕರು ನನಗೆ ಸ್ಪರ್ಧಿಸುವಂತೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಸ್ಪರ್ಧೆಗೆ ಒಪ್ಪಿಕೊಂಡಿದ್ದೇನೆ ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಹಾವೇರಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು," ಈಶ್ವರಪ್ಪ ಅವರ ಸಭೆ ಬಗ್ಗೆ ಮಾಹಿತಿ ಇಲ್ಲ. ಈಶ್ವರಪ್ಪ ಅವರಿಗೆ ಎಲ್ಲಾ ಗೊತ್ತಿದೆ. ನಾನು ಪಾರ್ಲಿಮೆಂಟರಿ ಬೋರ್ಡ್ ನಲ್ಲಿ ಏನು ಹೇಳಿದ್ದೆ ಎಂದು ಎಲ್ಲಾ ಅವರಿಗೆ ಗೊತ್ತಿದೆ" ಎಂದರು.
"ನನ್ನ ಹೆಸರು ಪಾರ್ಲಿಮೆಂಟರಿ ಬೋರ್ಡ್ ನಲ್ಲಿ ಕೂಡಾ ಫೈನಲ್ ಆಗಿರಲಿಲ್ಲ. ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಬೇರೆಯವರಿಗೆ ಅವಕಾಶ ಕೊಡಿ ಎಂದು ಹೇಳಿದ್ದೆ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಶಾ ಅವರು ಅನಿವಾರ್ಯ ಇದೆ, ನೀನು ಸ್ಪರ್ಧಿಸು ಎಂದು ಹೇಳಿದರು. ಹೀಗಾಗಿ ನಾನು ಸ್ಪರ್ದೆ ಮಾಡುತ್ತಿದ್ದೇನೆ" ಎಂದು ಹೇಳಿದರು.