ಶಿಗ್ಗಾಂವಿಯಲ್ಲಿ ಕೋಮುವಾದಿ ಬಿಜೆಪಿಯನ್ನು ಸೋಲಿಸಬೇಕು : ಅನೀಶ್ ಪಾಷಾ
ಬೆಂಗಳೂರು : ಸಂವಿಧಾನ ಉಳಿವಿಗಾಗಿ ಎಲ್ಲರೂ ಒಗ್ಗೂಡಿ ಕೋಮುವಾದಿ ಬಿಜೆಪಿ ಪಕ್ಷವನ್ನು ಸೋಲಿಸಬೇಕು. ಯಾಕೆಂದರೆ ಸಂತ ಶಿಶುನಾಳ ಶರೀಫರ ಸೌಹಾರ್ದತೆಗೆ ಹೆಸರುವಾಸಿಯಾದ ಈ ನಾಡಿನಲ್ಲಿ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿರುವ ಪಕ್ಷವಾಗಿದೆ ಎಂದು ವಕೀಲ ಅನೀಶ್ ಪಾಷಾ ದೂರಿದ್ದಾರೆ.
ರವಿವಾರ ಶಿಗ್ಗಾಂವಿಯಲ್ಲಿ ‘ಎದ್ದೆಳು ಕರ್ನಾಟಕ, ಜಾಗೃತ ಕರ್ನಾಟಕ, ಮುಸ್ಲಿಂ ಬಾಂಧವ್ಯ ವೇದಿಕೆ, ಜೀವಿಕ’ ಸಂಘಟನೆಗಳಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಜನರಿಗೆ ಬೇಕಾದ ಯಾವುದೇ ಮೂಲ ಸೌಲಭ್ಯಗಳನ್ನು ನೀಡಿಲ್ಲ. ಕೇವಲ ತಳ ಸಮುದಾಯಗಳ ಮೇಲೆ ಮತ್ತು ಅಲ್ಪಸಂಖ್ಯಾತರ ಮೇಲೆ ಶೋಷಣೆ ಮತ್ತು ಕೋಮು ಬೆಂಕಿ ಹಚ್ಚುತ್ತಾ ಬಂದಿದೆ. ಹಲಾಲ್, ಹಿಜಾಬ್, ಆಝಾನ್, ಹುಬ್ಬಳ್ಳಿ ದರ್ಗಾ ಸ್ಥಳಾಂತರಿಸಿ, ಹುಬ್ಬಳ್ಳಿ ಕೋಮು ಗಲಬೆಗೆ ಸೇರಿ ಅನೇಕ ಘಟನೆಗಳು ಬಿಜೆಪಿ ಹಾಗೂ ಸಂಘಪರಿವಾರದವರು ಸೇರಿಕೊಂಡು ನಡೆಸಿದ್ದಾರೆ. ಇವುಗಳನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು ಎಂದು ತಿಳಿಸಿದರು.
ಸೋಹೆಲ್ ಅಹ್ಮದ್ ಮಾತನಾಡಿ, ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಸಮಾನತಯೇ ಸಂವಿಧಾನದ ಆಶಯವಾಗಿದೆ. ಆದರೆ ವ್ಯವಸ್ಥಿತವಾಗಿ ಪ್ರಜಾಪ್ರಭುತ್ವವನ್ನು ಬಿಜೆಪಿ ದುರುಪಯೋಗ ಮಾಡಿಕೊಳ್ಳುತ್ತಿದೆ. ಈ ದೇಶದ ನೆಲದಲ್ಲಿ ಸೌಹಾರ್ದ ಇದೆ. ಶಿಗ್ಗಾವಿ ಸಂತರ ನಾಡು ಇಲ್ಲಿ ಕೋಮುದ್ವೇಷ ಇರುವುದು ಆತಂಕಕಾರಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧ್ವೇಷ ರಾಜಕೀಯ ಮಾಡುವ ಬಿಜೆಪಿ ಸರಕಾರ ಕಿತ್ತೊಗೆದು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಕಾಂಗ್ರೆಸ್ ಜನಪರ ಆಡಳಿತ ನಡೆಸುತ್ತದೆ ಎಂದರು.
ಎದ್ದೆಳು ಕರ್ನಾಟಕ ಸಂಘಟನೆಯ ಚೆನ್ನಮ್ಮ ಮಾತನಾಡಿ, ಕಾಂಗ್ರೆಸ್ ಸರಕಾರ ಮಹಿಳೆಯರಿಗೆ ಹಲವು ಯೋಜನೆಗಳನ್ನು ನೀಡಿ ಸಬಲರನ್ನಾಗಿ ಮಾಡುತ್ತಿದೆ. ಹಾಗಾಗಿ ನಾವೆಲ್ಲರೂ ಶಿಗ್ಗಾಂವಿ ಉಪಚುನಾವಣೆಯಲ್ಲಿ ಕಾಂಗ್ರೆಸ್‍ನ್ನು ಬೆಂಬಲಿಸೋಣ ಎಂದರು.