ʼಪಾಕಿಸ್ತಾನ್ ಝಿಂದಾಬಾದ್ ʼ ಘೋಷಣೆ ಕೂಗಿಲ್ಲ ; ಮುಹಮ್ಮದ್ ಶಫಿ ನಾಶಿಪುಡಿ ಸ್ಪಷ್ಟನೆ
ಬೆಂಗಳೂರು : ರಾಜ್ಯಸಭೆಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಾಸಿರ್ ಹುಸೇನ್ ಅವರ ಸಂಭ್ರಮಾಚರಣೆ ವೇಳೆ ಮುಹಮ್ಮದ್ ಶಫಿ ನಾಶಿಪುಡಿ ಅವರ ಮೇಲೆ ʼಪಾಕಿಸ್ತಾನ್ ಝಿಂದಾಬಾದ್ʼ ಘೋಷಣೆ ಕೂಗಿದ ಆರೋಪ ಮಾಡಲಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿದ ಆರೋಪಿತ ವ್ಯಕ್ತಿ ಮುಹಮ್ಮದ್ ಶಫಿ ನಾಶಿಪುಡಿ ಅವರು ‘ಪಾಕಿಸ್ತಾನ್ ಝಿಂದಾಬಾದ್ʼ ಎಂದು ಘೋಷಣೆ ಕೂಗಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ.
"ನಾನು ನಾಸಿರ್ ಸರ್ ಅವರ ಬೆಂಬಲಿಗ, ಚುನಾವಣೆಯಲ್ಲಿ ವಿಜೇತರಾದ ನಾಸಿರ್ ಹುಸೇನ್ ಅವರ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದು ನಿಜ. ‘ನಾಸಿರ್ ಸಾಬ್ ಝಿಂದಾಬಾದ್’ ಎಂದು ಎಲ್ಲರೂ ಜೈಕಾರ ಹಾಕಿದರು. ನಾನೂ ಜೈಕಾರ ಹಾಕಿದ್ದೇನೆ. ಆದರೆ ನನ್ನ ಮೇಲೆ ಬರುತ್ತಿರುವ ಈ ಆರೋಪ ಸುಳ್ಳು” ಎಂದು ವರ್ತಕರಾಗಿರುವ ಮಹಮ್ಮದ್ ಶಫಿ ನಾಶಿಪುಡಿ ತಿಳಿಸಿದರು.
ಘಟನೆಗೆ ಸಂಬಂಧಿಸಿದಂತೆ ನಾನು ಪೊಲೀಸರಿಗೆ ಎಲ್ಲಾ ಮಾಹಿತಿ ನೀಡಿದ್ದೇನೆ. ಯಾರು ಈ ದೇಶದ್ರೋಹದ ಘೋಷಣೆ ಕೂಗಿದ್ದಾರೆ ಅವರ ಮೇಲೆ ಸೂಕ್ತ ತನಿಖೆ ಮಾಡಿ ಕಠಿಣ ಕ್ರಮ ಕೈಗೊಳ್ಳಲಿ. ಪಾಕಿಸ್ತಾನ್ ಝಿಂದಾಬಾದ್ ಘೋಷಣೆ ಕೂಗಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ಪಾಕಿಸ್ತಾನ್ ಝಿಂದಾಬಾದ್’ ಎಂದು ಕೂಗಿದ್ದಾರೆ ಎಂಬ ಆರೋಪದ ಮೇರೆಗೆ ಮಹಮ್ಮದ್ ಶಫಿ ನಾಶಿಪುಡಿ ವಿರುದ್ಧ ದೇಶದ್ರೋಹ ಪ್ರಕರಣದಡಿ ದೂರು ದಾಖಲಿಸಿ ತನಿಖೆ ನಡೆಸುವಂತೆ ಬಿಜೆಪಿ ಕಾರ್ಯಕರ್ತರು ಪೊಲೀಸರಿಗೆ ಬುಧವಾರ ದೂರು ಸಲ್ಲಿಸಿದ್ದರು.