ಮಹಾರಾಷ್ಟ್ರದ ಮಹಾಯುತಿ ನಾಯಕರಿಗೆ ವಿಶೇಷ ಬಸ್, ವಿಮಾನ ವ್ಯವಸ್ಥೆ: ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್
ಶಿಗ್ಗಾಂವಿ : ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಸರಕಾರ ನೀಡುತ್ತಿಲ್ಲ ಎಂದು ಮಹಾರಾಷ್ಟ್ರದಲ್ಲಿ ಆಡಳಿತರೂಢ ಪಕ್ಷಗಳು ಸುಳ್ಳು ಹೇಳುತ್ತಿವೆ. ಅಲ್ಲಿನ ಮಹಾಯುತಿ ಸರಕಾರದ ಬಿಜೆಪಿ, ಶಿವಸೇನಾ(ಶಿಂಧೆ ಬಣ), ಎನ್ಸಿಪಿ(ಅಜಿತ್ ಪವಾರ್ ಬಣ) ನಾಯಕರಿಗೆ ಕರ್ನಾಟಕಕ್ಕೆ ಭೇಟಿ ಮಾಡಲು ವಿಶೇಷ ಬಸ್ ಅಥವಾ ವಿಮಾನ ವ್ಯವಸ್ಥೆ ಮಾಡುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಗುರುವಾರ ಶಿಗ್ಗಾಂವಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಹಾಯುತಿ ಸರಕಾರದ ನಾಯಕರು ಇಲ್ಲಿಗೆ ನೇರವಾಗಿ ಬಂದು ಜನರನ್ನು ಕೇಳಬಹುದು. ಜೊತೆಗೆ ಬಿಜೆಪಿ ಕಾರ್ಯಕರ್ತರ ಬಳಿಯೂ ಅಭಿಪ್ರಾಯ ತಿಳಿದುಕೊಳ್ಳಬಹುದು ಎಂದು ಸವಾಲು ಹಾಕಿದರು.
1.29 ಕೋಟಿ ಮಹಿಳೆಯರ ಖಾತೆಗೆ ನೇರವಾಗಿ ಗೃಹಲಕ್ಷ್ಮಿ ಹಣ 2 ಸಾವಿರ ರೂ. ಪ್ರತಿ ತಿಂಗಳು ಬರುತ್ತಿದೆ. ಮಹಿಳೆಯರು ಉಚಿತವಾಗಿ ಬಸ್ ಗಳಲ್ಲಿ ಓಡಾಡುತ್ತಿದ್ದಾರೆ. ಸುಮಾರು 50-52 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿಗಳಿಗೆ ಎಂದು ಮೀಸಲಿಡಲಾಗಿದೆ ಎಂದು ಶಿವಕುಮಾರ್ ಹೇಳಿದರು.
ನಮ್ಮ ಸಾಧನೆ ಬಗ್ಗೆ ಮಹಾರಾಷ್ಟದಲ್ಲಿ ಜಾಹೀರಾತು ನೀಡುತ್ತೇವೆ. ಮಹಾಯುತಿ ನಾಯಕರೆಲ್ಲ ಸುಳ್ಳುಗಾರರು. ಕರ್ನಾಟಕ ಮಾಡೆಲ್ ಇಡೀ ದೇಶಕ್ಕೆ ಮಾದರಿಯಾಗಿದೆ. ಇದು ಬಸವಣ್ಣನ ನಾಡು. ನಾವು ನುಡಿದಂತೆ ನಡೆಯುತ್ತೇವೆ, ನಡೆಯುತ್ತಿದ್ದೇವೆ ಎಂದು ಶಿವಕುಮಾರ್ ಹೇಳಿದರು.
ಬೊಮ್ಮಾಯಿ, ಸೋಮಣ್ಣ ಸಮಿತಿಯ ಸದಸ್ಯರೇ? :
ವಕ್ಫ್ ವಿಚಾರವಾಗಿ ರಚಿಸಲಾಗಿರುವ ಜಂಟಿ ಸಂಸದೀಯ ಸಮಿತಿ ರಾಜ್ಯಕ್ಕೆ ಭೇಟಿ ಕೊಟ್ಟಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ, ಯಾವ ಜಂಟಿ ಸಂಸದೀಯ ಸಮಿತಿ ಎನ್ನುವುದು ಇಲ್ಲ. ಕೇವಲ ಬಿಜೆಪಿಯ ನಾಯಕರು ಭೇಟಿ ಕೊಟ್ಟಿದ್ದಾರೆ ಎಂದು ಟೀಕಿಸಿದರು.
ಬೊಮ್ಮಾಯಿ, ಸೋಮಣ್ಣ ಆ ಸಮಿತಿಯಲ್ಲಿ ಇದ್ದಾರೆಯೇ? ತೇಜಸ್ವಿ ಸೂರ್ಯ ರಾಜಕೀಯಕ್ಕಾಗಿ ಹೆಲಿಕಾಪ್ಟರ್ ಅಲ್ಲಿ ಬಂದು ಹೋಗಿದ್ದಾರೆ. ಸಮಿತಿ ಭೇಟಿಯ ಬಗ್ಗೆ ಯಾವುದಾದರೂ ಅಧಿಕಾರಿಗಳಿಗೆ ತಿಳಿಸಿದ್ದಾರೆಯೇ? ಭೇಟಿ ಮಾಡಿ ಎಂದು ಯಾರಾದರೂ ಮನವಿ ಮಾಡಿದ್ದರೇ?. ಬಿಜೆಪಿ ಕಾಲದಲ್ಲಿಯೇ ಎಲ್ಲ ಪಹಣಿಗಳನ್ನು ಬದಲಾವಣೆ ಮಾಡಲಾಯಿತು. ಶೀಘ್ರದಲ್ಲಿಯೇ ಎಲ್ಲ ದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.
ಬಿಜೆಪಿ 2010ರಲ್ಲಿಯೇ ವಕ್ಫ್ ಬಗ್ಗೆ ಸುತ್ತೋಲೆ ಹೊರಡಿಸಿತ್ತು ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 2010 ಸೇರಿದಂತೆ 2020 ರಲ್ಲಿಯೂ ಎಲ್ಲ ಪಹಣಿಗಳನ್ನು ಬದಲಾಯಿಸಿದ್ದೇ ಬಿಜೆಪಿ. ಅದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ನಮ್ಮ ಬಳಿಯಿದೆ. ಧಾರವಾಡದಲ್ಲಿಯೂ ಇವೆ ಎಲ್ಲವನ್ನೂ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.