ಎಚ್ಚರ… ವಾರಾಂತ್ಯದ ಅಧಿಕ ನಿದ್ದೆ ನಿಮ್ಮ ಹೃದಯಕ್ಕೆ ಮಾರಕ!
ವಾರದ ಐದಾರು ದಿನಗಳ ಅವಧಿಯ ನಿಮ್ಮ ನಿದ್ದೆಯ ಕೊರತೆಯನ್ನು ವಾರಾಂತ್ಯದಲ್ಲಿ ನೀಗಿಸಿಕೊಳ್ಳಬಹುದು ಎಂದು ನೀವು ಭಾವಿಸಿದರೆ ಅದು ಶುದ್ಧ ತಪ್ಪು. ಪೆನ್ ಸ್ಟೇಟ್ ವಿಜ್ಞಾನಿಗಳು ಇತ್ತೀಚೆಗೆ ನಡೆಸಿದ ಅಧ್ಯಯನವೊಂದರ ಪ್ರಕಾರ, ಸಾಕಷ್ಟು ನಿದ್ದೆ ಇಲ್ಲದಿದ್ದರೆ ಅಂದರೆ ಕನಿಷ್ಠ ಪ್ರತಿ ರಾತ್ರಿ 5 ಗಂಟೆ ನಿದ್ದೆ ಮಾಡದಿದ್ದರೆ, ನಮ್ಮ ಹೃದಯ ಆರೋಗ್ಯ ವ್ಯವಸ್ಥೆಗೆ ಅದು ಮಾರಕವಾಗಬಲ್ಲದು. ಈ ಅಧ್ಯಯನ ವರದಿಯನ್ನು ಜರ್ನಲ್ ಸೈಕೊಸ್ಟಾಮಿಕ್ ಮೆಡಿಸಿನ್‍ನಲ್ಲಿ ಪ್ರಕಟಿಸಲಾಗಿದೆ.
ನಮ್ಮ ಹೃದಯ ಬಡಿತ ಹಾಗೂ ರಕ್ತದ ಒತ್ತಡ ನಮ್ಮ ಸುಕ್ಷೇಮಕ್ಕೆ ಎರಡು ಪ್ರಮುಖ ಅಂಶಗಳು. ನಿದ್ದೆಯ ಕೊರತೆ ಸಂದರ್ಭದಲ್ಲಿ ಇದು ಕ್ಷೀಣವಾಗುತ್ತದೆ. ಇಷ್ಟು ಮಾತ್ರವಲ್ಲದೇ ವಾರಾಂತ್ಯದಲ್ಲಿ ಈ ನಿದ್ದೆಯ ಕೊರತೆಯನ್ನು ಸರಿದೂಗಿಸಲು ಹೆಚ್ಚು ನಿದ್ದೆ ಮಾಡುವುದು ನಮ್ಮ ವ್ಯವಸ್ಥೆಯನ್ನು ಸಹಜಗೊಳಿಸುವ ಕ್ರಮವಲ್ಲ.
ಈ ಅಧ್ಯಯನ ತಂಡದ ಸದಸ್ಯ ಹಾಗೂ ಬಯೋಬಿಹೇವಿಯರಲ್ ಹೆಲ್ತ್ ವಿಭಾಗದ ಸಹ ಪ್ರಾಧ್ಯಾಪಕರಾದ ಆ್ಯನ್ ಮೇರಿ ಚಾಂಗ್ ಅವರ ಪ್ರಕಾರ, ಅಮೆರಿಕದ ಶೇಕಡ 65 ಮಂದಿ ಮಾತ್ರ ನಿಯತವಾಗಿ ಏಳು ಗಂಟೆ ನಿದ್ದೆ ಮಾಡುತ್ತಾರೆ. "ನಮ್ಮ ಸಂಶೋಧನೆಯಿಂದ ತಿಳಿದುಬರುವಂತೆ ಪದೇ ಪದೇ ನಿಮ್ಮ ಹೃದಯ ಆರೋಗ್ಯದ ಮೇಲೆ ಆಗುವ ಇಂಥ ಆಕ್ರಮಣಗಳು ಭವಿಷ್ಯದಲ್ಲಿ ಹೃದಯ ರೋಗಕ್ಕೆ ಕಾರಣವಾಗುತ್ತವೆ"
ನಿದ್ದೆ ಹಾಗೂ ಹೃದಯ ಆರೋಗ್ಯದ ಸಂಬಂಧವನ್ನು ಸಂಶೋಧಿಸುವ ನಿಟ್ಟಿನಲ್ಲಿ 20 ರಿಂದ 35 ವರ್ಷ ವಯಸ್ಸಿನ 15 ಮಂದಿ ಆರೋಗ್ಯವಂತ ಯುವಕರನ್ನು 11 ದಿನಗಳ ಕಾಲ ಪರೀಕ್ಷೆಗೆ ಒಳಪಡಿಸಿ, ಅವರ ನಿದ್ದೆಯ ಕ್ರಮವನ್ನು ದಾಖಲಿಸಲಾಗಿದೆ. ಮೊದಲ ಮೂರು ರಾತ್ರಿ ದಿನಕ್ಕೆ 10 ಗಂಟೆ ನಿದ್ದೆ ಮಾಡಲು ಅವಕಾಶ ನೀಡಲಾಗಿತ್ತು. ಬಳಿಕ ಇದನ್ನು 5 ಗಂಟೆಗೆ ನಿರ್ಬಂಧಿಸಿ, ಪುನಶ್ಚೇನಕ್ಕೆ ಎರಡು ರಾತ್ರಿಗಳ ಅವಕಾಶ ನೀಡಲಾಗಿತ್ತು. ಮತ್ತೆ 10 ಗಂಟೆ ನಿದ್ದೆಯ ಅವಕಾಶ ಮಾಡಿಕೊಡಲಾಯಿತು. ಇದು ಹೃದಯ ಆರೋಗ್ಯದ ಮೇಲೆ ಬೀರುವ ಪರಿಣಾಮವನ್ನು ಮೌಲ್ಯಮಾಪನ ಮಾಡಲಾಯಿತು.
ವಾರಾಂತ್ಯದಲ್ಲಿ ಇವರಿಗೆ ಸಾಕಷ್ಟು ನಿದ್ದೆಗೆ ಅವಕಾಶ ನೀಡಿದರೂ, ಆಗಿರುವ ಹಾನಿಯಿಂದ ಸಂಪೂರ್ಣ ಪುನಶ್ಚೇತನಗೊಳ್ಳಲು ಸಾಧ್ಯವಾಗಿಲ್ಲ ಎನ್ನುವುದು ಸಂಶೋಧನೆಯಿಂದ ದೃಢಪಟ್ಟಿದೆ.