ಬಿಳಿ ಬ್ರೆಡ್ಡಿನ ಸೇವನೆ ಮಕ್ಕಳ ಆರೋಗ್ಯಕ್ಕೆ ಹಾನಿಕಾರಕ : ಸಂಶೋಧನಾ ವರದಿ
ಅತಿಯಾದ ಸೇವನೆಯಿಂದ ಕೊಲೋ-ರೆಕ್ಟಲ್ ಕ್ಯಾನ್ಸರ್ ಬರಬಹುದು!
ಸಾಂದರ್ಭಿಕ ಚಿತ್ರ | PC : onlymyhealth.com
ಅವಸರದ ಬದುಕಿನಲ್ಲಿ ಬ್ರೇಕ್ ಫಾಸ್ಟ್ ಎಂದು ತೆಗೆದುಕೊಳ್ಳುವ ಕೆಲವು ಆಹಾರ ಪಧಾರ್ಥಗಳು ನಮ್ಮ ಆರೋಗ್ಯಕ್ಕೇ ಕುತ್ತು ತರಬಲ್ಲವು. ಅಂಥವುಗಳಲ್ಲಿ ಬಿಳಿ ಬ್ರೆಡ್ ಕೂಡ ಒಂದು. ಬಿಳಿ ಬ್ರೆಡ್ಡಿನ ಸೇವನೆ ಮಕ್ಕಳ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಸಂಶೋಧನೆಗಳಿಂದ ಈಗ ದೃಢವಾಗಿದೆ.
ಬಿಳಿ ಬ್ರೆಡ್ ಬಹಳ ಅಪಾಯಕಾರಿಯಾಗಿದೆ ಮತ್ತು ಇದರಿಂದ ಕ್ಯಾನ್ಸರ್ ಕೂಡ ಆಗಬಹುದು ಎಂದು ಹೊಸ ವರದಿಗಳು ಹೇಳುತ್ತಿವೆ. ತುಂಬಾ ತುರ್ತಿನ ನಗರ ಜೀವನದಲ್ಲಿ ಬಿಳಿ ಬ್ರೆಡ್ಡಿನ ಸೇವನೆ ಸಾಮಾನ್ಯ. ಬೆಳಗ್ಗಿನ ಉಪಹಾರಕ್ಕಾಗಿ ಬ್ರೆಡ್ ತಿನ್ನುವವರ ಸಂಖ್ಯೆಯೇ ನಗರಗಳಲ್ಲಿ ಹೆಚ್ಚು. ಈಗ ಅದೇ ಬ್ರೆಡ್ ನಮ್ಮ ಮತ್ತು ನಮ್ಮ ಮಕ್ಕಳ ಆರೋಗ್ಯಕ್ಕೆ ಹಾನಿಕಾರಕ ಎಂದು ವರದಿಗಳು ತಿಳಿಸಿವೆ.
ಸಂಶೋಧನಾ ವರದಿಯೊಂದು ಈ ರೀತಿ ಹೇಳಿದೆ. ಈ ಸಂಶೋಧನೆಯಲ್ಲಿ 1,18,210 ಜನರ ಮೇಲೆ ಅಧ್ಯಯನ ನಡೆಸಲಾಗಿದೆ. ಅತಿಯಾದ ಬಿಳಿ ಬ್ರೆಡ್ಡಿನ ಸೇವನೆಯಿಂದ ಕೊಲೋ-ರೆಕ್ಟಲ್ ಕ್ಯಾನ್ಸರ್ ಕೂಡ ಆಗಬಹುದು ಎಂದು ಈ ಸಂಶೋಧನಾ ವರದಿಯಿಂದ ಕಂಡು ಹಿಡಿಯಲಾಗಿದೆ. ಕೊಲೋ-ರೆಕ್ಟಲ್ ಕ್ಯಾನ್ಸರ್ ಮದ್ಯ ಸೇವನೆಯಿಂದಲೂ ಆಗಬಹುದು. ಅಂದರೆ, ಅಪಾಯಕಾರಿ ಮದ್ಯ ಸೇವನೆಯಿಂದ ಆಗುವ ಕ್ಯಾನ್ಸರ್, ಈಗ ಬಿಳಿ ಬ್ರೇಡ್ಡಿನಿಂದ ಕೂಡ ಆಗುತ್ತಿದೆ. ಬಿಳಿ ಬ್ರೆಡ್ ಎಷ್ಟು ಅಪಾಯಕಾರಿ ಎಂಬುದನ್ನು ಇದರಿಂದಲೇ ಅರ್ಥ ಮಾಡಿಕೊಳ್ಳಬಹುದು. ಅತಿಯಾಗಿ ಬಿಳಿ ಬ್ರೇಡ್ಡನ್ನು ಸೇವಿಸುತ್ತಿದ್ದರೆ, ಅದನ್ನು ತಕ್ಷಣ ತ್ಯಜಿಸುವುದು ಆರೋಗ್ಯಕ್ಕೆ ಅತ್ಯಗತ್ಯ.
16 ನವೆಂಬರ್ 2023ರಂದು ಈ ಸಂಶೋಧನೆಯ ವರದಿಯನ್ನು ಪ್ರಕಟಿಸಲಾಗಿತ್ತು. "Diet Wide Association, Genetic Susceptibility and Colorectal Cancer Risk: A Prospective Cohort Study" ಶೀರ್ಷಿಕೆಯಲ್ಲಿ ಈ ವರದಿಯನ್ನು ಪ್ರಕಟಿಸಲಾಗಿತ್ತು.
ಈ ಸಂಶೊಧನೆಯಲ್ಲಿ 139 ಆಹಾರ ಪದಾರ್ಥಗಳ ಕುರಿತು ಮತ್ತು ಅವುಗಳ ಪೌಷ್ಟಿಕಾಂಶಗಳ ಮೌಲ್ಯಗಳನ್ನು ಹೇಗೆ ನಿರ್ಧರಿಸಲಾಗುತ್ತದೆ ಎಂದು ವಿವರಿಸಲಾಗಿದೆ. ಹಾಗೆಯೇ, ಅವುಗಳು ಆರೋಗ್ಯದ ಮೇಲೆ ಹೇಗೆ ಪರಿಣಾಮವನ್ನು ಬೀರುತ್ತದೆ ಎಂದೂ ವಿವರಿಸಲಾಗಿದೆ. ಸುಮಾರು 13 ವರ್ಷಗಳ ಕಾಲ ಈ ಸಂಶೋಧನೆ ನಡೆಸಲಾಗಿತ್ತು.
ಚೈನಾ ಮತ್ತು ಸ್ಕಾಟಿಷ್ ವಿಶ್ವವಿದ್ಯಾಲಯದ ಸಂಶೋಧಕರು ಈ ಸಂಶೋಧನೆಯನ್ನು ನಡೆಸಿದ್ದರು. ಲಂಡನ್ನ ಬಯೋ ಬ್ಯಾಂಕಿನಿಂದ ಮಾಹಿತಿಯನ್ನು ತೆಗೆದುಕೊಳ್ಳಲಾಗಿತ್ತು. ಆ ಮಾಹಿತಿ ಆಧರಿಸಿ ನಮ್ಮ ಬದಲಾಗುತ್ತಿರುವ ಜೀವನಶೈಲಿಯಿಂದ ನಾವು ಹೇಗೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇವೆ ಎಂದು ಶೋಧಿಸಲಾಗಿತ್ತು. ಜಗತ್ತಿನ 20ರಿಂದ 25% ಕ್ಯಾನ್ಸರ್ ಕೇವಲ ನಮ್ಮ ಆಹಾರದಿಂದ ಆಗುತ್ತಿದೆ ಎಂದೂ ವರದಿ ಕಂಡು ಹಿಡಿದಿತ್ತು.
ಅಂದರೆ, ಕ್ಯಾನ್ಸರ್ ರೋಗವನ್ನು ಹುಟ್ಟು ಹಾಕುವಲ್ಲಿ ನಮ್ಮ ನಿತ್ಯದ ಆಹಾರ ಪ್ರಮುಖ ಪಾತ್ರ ವಹಿಸುತ್ತಿದೆ. ಕೊಲೋರೆಕ್ಟಲ್ ಕ್ಯಾನ್ಸರ್ ಕರುಳಿನ ಕ್ಯಾನ್ಸರ್ ಆಗಿದೆ; ಕೊಲೋನ್ ಅಥವಾ ಗುದನಾಳದ ಜೀವಕೋಶಗಳಿಂದ ಪ್ರಾರಂಭಗೊಂಡು ಜೀರ್ಣಾಂಗ ವ್ಯವಸ್ಥೆಯವರೆಗೆ ತಲುಪುತ್ತದೆ. ಈ ಕ್ಯಾನ್ಸರ್ ಜಗತ್ತಿನಲ್ಲಿ ಮೂರನೇ ಸಾಮಾನ್ಯ ಕ್ಯಾನ್ಸರ್ ಆಗಿದೆ; ಹೆಚ್ಚಾಗಿ ವರದಿಯಾಗುತ್ತಿರುವ ಕ್ಯಾನ್ಸರ್ ಗಳಲ್ಲಿ ಕೊಲೋ ರೆಕ್ಟಲ್ ಕ್ಯಾನ್ಸರ್ ಮೂರನೇ ಸ್ಥಾನ ಪಡೆದಿದೆ.
ಈ ಅನಾರೋಗ್ಯಕ್ಕೆ ಕಾರಣವಾಗುವುದಾದರೆ ಬಿಳಿ ಬ್ರೆಡ್ ನಲ್ಲಿ ಹಾಗಾದರೆ ಏನಿದೆ?
ಬಿಳಿ ಬ್ರೇಡ್ ನಲ್ಲಿ ಕಡಿಮೆ ಪೋಷಕಾಂಶಗಳಿವೆ ಎನ್ನಲಾಗಿದೆ. ಇದರಲ್ಲಿ ಕಡಿಮೆ ಗುಣಮಟ್ಟದ ಕಾರ್ಬೊಹೈಡ್ರೇಟ್ಸ್ ಮತ್ತು ಸಕ್ಕರೆ ಇದೆ. ಇದರಲ್ಲಿ ಹೈ ಗ್ಲೈಸೆಮಿಕ್ ಇಂಡೆಕ್ಸ್ ಅತಿಯಾಗಿರುತ್ತದೆ; ಇದು ರಕ್ತದಲ್ಲಿರುವ ಸಕ್ಕರೆಯ ಅಂಶವನ್ನು ತ್ವರಿತವಾಗಿ ಏರಿಸುತ್ತದೆ. ಅಮೇರಿಕನ್ ಡಯಾಬಿಟಿಸ್ ಅಸೋಸಿಯೇಷನ್ ಮಧುಮೇಹ ರೋಗಿಗಳು ಬಿಳಿ ಬ್ರೆಡ್ ನ ಸೇವನೆಯನ್ನು ತ್ಯಜಿಸಬೇಕು ಎಂದು ಈ ಹಿಂದೆಯೇ ಎಚ್ಚರಿಸಿತ್ತು.
ಎರಡು ವರ್ಷಗಳಲ್ಲಿ ಲಂಡನ್ ನಲ್ಲಿ ಬಿಳಿ ಬ್ರೆಡ್ ಗೆ ಪರ್ಯಾಯವಾಗಿ ಉತ್ತಮ ಗುಣಮಟ್ಟದ ಪೋಷಕಾಂಶಗಳಿರುವ ಬ್ರೆಡ್ ಸಿಗುವ ಸಾಧ್ಯತೆಯಿದೆ. ಇಂತಹ ಆರೋಗ್ಯಕರ ಬ್ರೆಡ್ ಉತ್ಪಾದಿಸುವಲ್ಲಿ ಲಂಡನ್ ಸರಕಾರವೇ ಹಣ ನೀಡುತ್ತಿದೆ ಎಂದು BBC ವರದಿ ಮಾಡಿದೆ.
ಲಂಡನ್ ಸರಕಾರದ ಧನಸಹಾಯದ ಬಳಿಕ ಬಿಳಿ ಬ್ರೆಡ್ ನ ರುಚಿಯಿರುವ ಹೊಸ ಬ್ರೆಡ್ಡಿನ ಶೋಧನೆಗಾಗಿ ವಿಜ್ಞಾನಿಗಳು ದುಡಿಯುತ್ತಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಈ ಆರೋಗ್ಯಕರ ಬ್ರೆಡ್ಡು ಮಾರುಕಟ್ಟೆಗೆ ಬರಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.