ಗಂಭೀರ ಆರೋಗ್ಯ ಸಮಸ್ಯೆಗಳನ್ನುಂಟು ಮಾಡಬಹುದಾದ ಐದು ಕೆಟ್ಟ ಅಭ್ಯಾಸಗಳು
ಸಾಂದರ್ಭಿಕ ಚಿತ್ರ | Photo: PTI
ತಿಳಿದೋ ತಿಳಿಯದೆಯೋ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರಬಹುದಾದ ವಿವಿಧ ಕೆಟ್ಟ ಅಭ್ಯಾಸಗಳನ್ನು ನಾವು ರೂಢಿಸಿಕೊಂಡಿರುತ್ತೇವೆ. ಇದು ನಮ್ಮ ಆರೋಗ್ಯಕ್ಕೆ ತೀವ್ರ ಹಾನಿಯನ್ನುಂಟು ಮಾಡಬಹುದು.
ಕೆಲವು ಅಭ್ಯಾಸಗಳು ನಮ್ಮ ಗುರಿಗಳನ್ನು ಸಾಧಿಸಲು ನೆರವಾಗುತ್ತವೆ ಮತ್ತು ನಮ್ಮನ್ನು ಉತ್ತಮರನ್ನಾಗಿಸುತ್ತವೆ. ಕೆಲವು ಅಭ್ಯಾಸಗಳು ನಮ್ಮಿಂದ ಬಹಳಷ್ಟನ್ನು ಕಿತ್ತುಕೊಳ್ಳುತ್ತವೆ. ಅವು ನಮ್ಮ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಹಾನಿಯನ್ನುಂಟು ಮಾಡುತ್ತವೆ. ನಾವು ತಕ್ಷಣವೇ ತೊರೆಯಬೇಕಾದ ಕೆಲವು ಕೆಟ್ಟ ಅಭ್ಯಾಸಗಳ ಮಾಹಿತಿಯಿಲ್ಲಿದೆ:
►ಸಾಕಷ್ಟು ನೀರು ಕುಡಿಯದಿರುವುದು
ಉತ್ತಮ ಆರೋಗ್ಯವನ್ನು ಕಾಯ್ದುಕೊಳ್ಳಲು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ಅಗತ್ಯವಾಗಿದೆ. ಇದು ಚರ್ಮವು ಮೃದುವಾಗಿರಲು ನೆರವಾಗುತ್ತದೆ,ಶರೀರವನ್ನು ತಂಪಾಗಿರಿಸುತ್ತದೆ, ಸ್ನಾಯುಗಳು ಮತ್ತು ಕೀಲುಗಳು ಉತ್ತಮವಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ ಮತ್ತು ಮೂತ್ರಪಿಂಡಗಳ ಮೂಲಕ ಶರೀರದಲ್ಲಿಯ ವಿಷವಸ್ತುಗಳನ್ನು ಹೊರಗೆ ಹಾಕಲು ನೆರವಾಗುತ್ತದೆ.
►ಸರಿಯಾಗಿ ನಿದ್ರೆ ಮಾಡದಿರುವುದು
ನ್ಯಾಷನಲ್ ಹಾರ್ಟ್,ಲಂಗ್ ಆ್ಯಂಡ್ ಬ್ಲಡ್ ಇನ್ಸ್ಟಿಟ್ಯೂಟ್ (ಎನ್ಎಚ್ಎಲ್ಬಿಐ) ಪ್ರಕಾರ ಸಾಕಷ್ಟು ನಿದ್ರೆಯನ್ನು ಮಾಡದಿರುವುದು ಇಡೀ ಶರೀರದ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡಬಲ್ಲದು. ನಿದ್ರೆಯ ಕೊರತೆಯು ಹೃದ್ರೋಗ, ಅಧಿಕ ರಕ್ತದೊತ್ತಡ,ಮೂತ್ರಪಿಂಡ ರೋಗ, ಮಧುಮೇಹ,ಪಾರ್ಶ್ವವಾಯು,ಬೊಜ್ಜು ಮತ್ತು ಖಿನ್ನತೆ ಸೇರಿದಂತೆ ಹಲವಾರು ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳೊಂದಿಗೆ ನಂಟು ಹೊಂದಿದೆ.
►ರಾತ್ರಿ ತಡವಾಗಿ ಊಟ ಮಾಡುವುದು
ರಾತ್ರಿ ಮಲಗುವ ಸಮಯದ ವೇಳೆ ಊಟ ಮಾಡುವುದು ಪಚನಕ್ರಿಯೆಯ ಮೇಲೆ ಪರಿಣಾಮವನ್ನು ಬೀರುತ್ತದೆ ಎನ್ನುವುದು ಸಂಶೋಧನೆಗಳಲ್ಲಿ ಬೆಳಕಿಗೆ ಬಂದಿದೆ. 2020ರಲ್ಲಿ ಪ್ರಕಟಗೊಂಡ ಅಧ್ಯಯನ ವರದಿಯೊಂದು ರಾತ್ರಿ ತಡವಾಗಿ ಊಟ ಮಾಡುವುದು ದೇಹತೂಕ ಹೆಚ್ಚಲು ಕಾರಣವಾಗುತ್ತದೆ ಎನ್ನುವುದನ್ನು ತೋರಿಸಿದೆ. ಮಲಗುವ ಮೊದಲಿನ ಮೂರು ಗಂಟೆಗಳೊಳಗೆ ಊಟ ಮಾಡುವುದು ರಾತ್ರಿಯಿಡೀ ಆ್ಯಸಿಡಿಟಿಯ ತೊಂದರೆಗಳಿಗೆ ಕಾರಣವಾಗುತ್ತದೆ.
►ವ್ಯಾಯಾಮ ಮಾಡದಿರುವುದು
ವ್ಯಾಯಾಮವು ಹಲವಾರು ಆರೋಗ್ಯ ಲಾಭಗಳನ್ನು ಹೊಂದಿದೆ. ವ್ಯಾಯಾಮವು ದೇಹತೂಕವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ;ಮಿದುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ;ಮೂಳೆಗಳು, ಸ್ನಾಯುಗಳು,ಹೃದಯ ಮತ್ತು ಶ್ವಾಸಕೋಶಗಳನ್ನು ಬಲಗೊಳಿಸುತ್ತದೆ;ಚೆನ್ನಾಗಿ ನಿದ್ರಿಸಲು ನೆರವಾಗುತ್ತದೆ;ಮಾನಸಿಕ ಆರೋಗ್ಯವನ್ನು ಹೆಚ್ಚಿಸುತ್ತದೆ;ಏಕಾಗ್ರತೆಯನ್ನು ಮತ್ತು ನಿರ್ಧಾರಗಳನ್ನು ಕೈಗೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ;ದೈನಂದಿನ ಚಟುವಟಿಕೆಗಳನ್ನು ನಡೆಸುವ ಸಾಮರ್ಥ್ಯವನ್ನು ಸುಧಾರಿಸುತ್ತದೆ.
►ಆಹಾರ ಸೇವಿಸುವಾಗ ಅನ್ಯಮನಸ್ಕರಾಗಿರುವುದು
ಊಟ ಮಾಡುತ್ತಿರುವಾಗ ಬೇರೆಡೆಗೆ ಗಮನವನ್ನು ಹರಿಸುವುದು ಹೆಚ್ಚಿನ ದೇಹತೂಕದೊಂದಿಗೆ ಸಂಬಂಧವನ್ನು ಹೊಂದಿದೆ ಎನ್ನುವುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಮೊಬೈಲ್ ಇತ್ಯಾದಿ ಸಾಧನಗಳನ್ನು ದೂರವಿಟ್ಟು ಮತ್ತು ಕೆಲಸದಿಂದ ವಿರಾಮವನ್ನು ಪಡೆದುಕೊಂಡು ಊಟ ಮಾಡುವುದರಿಂದ ನೀವು ಏನನ್ನು ತಿನ್ನುತ್ತಿದ್ದೀರಿ ಎನ್ನುವುದರ ಮೇಲೆ ಗಮನವನ್ನು ಹರಿಸಬಹುದು,ಇದರಿಂದಾಗಿ ನೀವು ನಿಮ್ಮ ಊಟವನ್ನು ಆನಂದಿಸಲು ಸಾಧ್ಯವಾಗುತ್ತದೆ.
ಕೃಪೆ; dnaindia.com