ಸೋಮವಾರವೇ ಹೃದಯಾಘಾತ ಅಧಿಕ: ಹೊಸ ಅಧ್ಯಯನ ಏನು ಹೇಳುತ್ತದೆ?
ಸಾಂದರ್ಭಿಕ ಚಿತ್ರ.
ಹೃದಯಾಘಾತಕ್ಕೆ ಬಹುಮುಖಿ ಕಾರಣಗಳಿದ್ದರೂ, ಮಾರಣಾಂತಿಕ ಹೃದಯಾಘಾತಗಳು ಸಾಮಾನ್ಯವಾಗಿ ಸೋಮವಾರಗಳಂದೇ ಹೆಚ್ಚಾಗಿ ಸಂಭವಿಸುತ್ತವೆ ಎಂದು ವರದಿಯಾಗಿದೆ. ಇದಕ್ಕೆ ಏನು ಕಾರಣ ಎನ್ನುವುದನ್ನು ಆರೋಗ್ಯ ತಜ್ಞರು ವಿಶ್ಲೇಷಿಸಿದ್ದಾರೆ.
ಬ್ರಿಟಿಷ್ ಹಾರ್ಟ್ ಫೌಂಡೇಷನ್ನ ವರದಿಯೊಂದರ ಪ್ರಕಾರ, ಇತರ ದಿನಗಳಿಗಿಂತ ಸೋಮವಾರ ಹೃದಯಾಘಾತವಾಗುವ ಪ್ರಕರಣಗಳು ಹೆಚ್ಚು. ಇದನ್ನು ನೀಲಿ ಸೋಮವಾರ ಪ್ರಕ್ರಿಯೆ ಎಂದು ಅವರು ಕರೆದಿದ್ದಾರೆ. ವಾರದ ಇತರ ದಿನಗಳಿಗೆ ಹೋಲಿಸಿದರೆ ಹೃದಯಾಘಾತ ಸಾಧ್ಯತೆ ಸೋಮವಾರ ಶೇಕಡ 13ರಷ್ಟು ಅಧಿಕ ಎನ್ನುವುದು ಅವರ ಅಭಿಮತ. ಇನ್ನಷ್ಟು ಅಳಕ್ಕೆ ಇಳಿದು ನೋಡಿದರೆ, ಬೆಳಿಗ್ಗೆ 6 ರಿಂದ 10 ಗಂಟೆಯ ಅವಧಿಯಲ್ಲಿ ಹೃದಯಾಘಾತ ಸಾಧ್ಯತೆ ಹೆಚ್ಚು. ಏಕೆಂದರೆ ಸಾಮಾನ್ಯವಾಗಿ ಬೆಳಿಗ್ಗೆ ಏಳುವ ಸಮಯದಲ್ಲಿ ಕೊಲೆಸ್ಟ್ರಾಲ್ ಮತ್ತು ಹಾರ್ಮೋನ್ಗಳು ಅಧಿ ಪ್ರಮಾಣದಲ್ಲಿ ಇರುತ್ತದೆ.
ತಜ್ಞರ ಪ್ರಕಾರ, ವ್ಯಕ್ತಿ ಒತ್ತಡದಲ್ಲಿರುವಾಗ ಹಾರ್ಮೋನ್ ಮಟ್ಟ ಹೃದಯದ ಲಯದ ಮೇಲೆ ಪರಿಣಾಮ ಬೀರಬಹುದು ಹಾಗೂ ಇದು ಹೃದಯಾಘಾತಕ್ಕೆ ಕಾರಣವಾಗಬಹುದು. ಸೋಮವಾರಗಳಂದು ಹೃದಯಾಘಾತ ಏಕೆ ಅಧಿಕ? ಇದಕ್ಕೆ ಕಾರಣಗಳು ಏನು ಇರಬಹುದು ಎನ್ನುವ ಪ್ರಶ್ನೆಗಳನ್ನು ಈ ಅಧ್ಯಯನ ಹುಟ್ಟುಹಾಕುತ್ತದೆ. ಮಹಿಮ್ನ ಎಸ್.ಎಲ್.ರಹೇಜಾ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಹರಶ್ ಮೆಹ್ತಾ ಮತ್ತು ಫೋರ್ಟಿಸ್ ಆಸ್ಪತ್ರೆಯ ಡಾ.ಪ್ರಶಾಂತ್ ಪವಾರ್ ಪ್ರಕಾರ, ಸೋಮವಾರ ಹೃದಯಾಘಾತ ಹೆಚ್ಚಲು ಸಂಭಾವ್ಯ ಕಾರಣ ಒತ್ತಡ ಇರಬಹುದು. ಸೋಮವಾರ ಸಾಮಾನ್ಯವಾಗಿ ಹೊಸ ವಾರ ಆರಂಭವಾಗುತ್ತದೆ. ಇದು ಹೆಚ್ಚು ಒತ್ತಡ ಮತ್ತು ಉದ್ವಿಗ್ನತೆಗೆ ಕಾರಣವಾಗುತ್ತದೆ. ವಾರಾಂತ್ಯದ ವಿರಾಮದ ಬಳಿಕ ಕೆಲಸಕ್ಕೆ ಮರಳುವ ಸಂದರ್ಭದ ಒತ್ತಡದಿಂದಾಗಿ ಮಾರಣಾಂತಿಕ ಹೃದಯಾಘಾತಗಳು ಸೋಮವಾರ ಸಂಭವಿಸಲು ಕಾರಣ" ಎನ್ನುವುದು ಅವರ ವಿಶ್ಲೇಷಣೆ.
ಇದರ ಜತೆಗೆ ವಾರಾಂತ್ಯದ ಸಂದರ್ಭದಲ್ಲಿ ದೈನಂದಿನ ಕ್ರಮದಲ್ಲಿ ಆಗುವ ವ್ಯತ್ಯಯಯೂ ಪ್ರಮುಖ ಕಾರಣವಾಗುತ್ತದೆ. ವಾರಾಂತ್ಯದಲ್ಲಿ ಆಹಾರ ಕ್ರಮಗಳು, ನಿದ್ದೆಯ ವಿಧಾನ ಮತ್ತು ವ್ಯಾಯಾಮದಂಥ ಅಂಶಗಳೂ ಮಹತ್ವದ್ದಾಗುತ್ತವೆ. ಸೋಮವಾರ ದಿಢೀರನೇ ಮತ್ತೆ ಮಾಮೂಲಿ ಕ್ರಮಕ್ಕೆ ಮರಳುವುದರಿಂದ ಹೃದಯಕ್ಕೆ ಹೆಚ್ಚಿನ ದಣಿವು ಉಂಟಾಗುವ ಸಾಧ್ಯತೆ ಇದೆ ಎನ್ನುತ್ತಾರೆ.
ಜತೆಗೆ ವೈದ್ಯಕೀಯ ಸಲಹೆಯನ್ನು ಪಡೆಯುವಲ್ಲಿ ಆಗುವ ವಿಳಂಬ, ಸಾಮಾಜಿಕ ಮತ್ತು ನಡವಳಿಕೆ ಅಂಶಗಳು, ಸೋಮವಾರ ಅಧಿಕ ದಟ್ಟಣೆಯಿಂದ ಉಂಟಾಗುವ ಒತ್ತಡ ಕೂಡಾ ಇಂಥ ಮಾರಣಾಂತಿಕ ಸಮಸ್ಯೆಗೆ ಪೂರಕವಾಗಬಹುದು.
ಕೃಪೆ: hindustantimes.com